ಶಿವಮೊಗ್ಗ, ಏ 01 (DaijiworldNews/DB): ಯಾರದ್ದೋ ಮನೆಯ ಬೀಗ ಒಡೆದು ಗೃಹಪ್ರವೇಶ ಮಾಡಿಸಿಕೊಂಡು ತನ್ನದೇ ಮನೆ ಎಂಬಂತೆ ಬಿಂಬಿಸಿಕೊಂಡ ವ್ಯಕ್ತಿಯೋರ್ವ ಸದ್ಯ ಪೊಲೀಸ್ ಠಾಣೆಗೆ ಅಲೆದಾಡಬೇಕಾಗಿ ಬಂದಿದೆ. ಸಿನಿಮೀಯ ರೀತಿಯ ಈ ಘಟನೆ ನಡೆದದ್ದು ಶಿವಮೊಗ್ಗದಲ್ಲಿ.
ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿರುವ ಜಯಮ್ಮಅವರು ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಟ್ವಿನ್ ಹೌಸ್ ನ್ನು ಕಳೆದ 12 ವರ್ಷಗಳ ಹಿಂದೆ ಖರೀದಿ ಮಾಡಿ ಕ್ರಯ ಪತ್ರ ಮಾಡಿಸಿಕೊಂಡಿದ್ದರು. ಅಲ್ಲದೆ, ವಿದ್ಯುತ್ ಸಂಪರ್ಕವನ್ನೂ ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದರು. ಈ ಎರಡು ಮನೆಯ ಪೈಕಿ ಒಂದನ್ನು ಲೀಸ್ ಗೆ ನೀಡಿದ್ದರೆ, ಇನ್ನೊಂದು ಮನೆ ಖಾಲಿ ಇತ್ತು. ಒಂದು ದಿನ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಇನ್ನೊಂದು ಮನೆಯ ಬೀಗ ಒಡೆದು ಆ ಮನೆಯಲ್ಲಿ ವಾಸವಾಗಿದ್ದನ್ನಲ್ಲದೆ, ಗೃಹ ಪ್ರವೇಶವನ್ನೂ ಮಾಡಿಸಿದ್ದ. ಇದರಿಂದ ಸಂಶಯ ಬಂದ ಲೀಸ್ ಗಿದ್ದ ಕುಟುಂಬ, ಮನೆ ಮಾಲಕಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಗಾಬರಿಯಾದ ಮನೆ ಮಾಲಿಕರು ಶಿವಮೊಗ್ಗಕ್ಕೆ ಆಗಮಿಸಿದಾಗ ವ್ಯಕ್ತಿಯ ಕುತಂತ್ರ ಗೊತ್ತಾಗಿದೆ. ಆತನನ್ನು ಪ್ರಶ್ನಿಸಿದಕ್ಕೆ ಇದು ನನ್ನ ಮನೆ ನೀವ್ಯಾರು ಎಂದು ಮರು ಪ್ರಶ್ನೆ ಹಾಕಿದ್ದಾನೆ. ಅಲ್ಲದೆ, ತನ್ನ ಹೆಸರಿನಲ್ಲಿರುವ ವಿದ್ಯುತ್ ಬಿಲ್ ನ್ನೂ ತೋರಿಸಿದ್ದಾನೆ.
ವಿದ್ಯುತ್ ಸಂಪರ್ಕವನ್ನು ತಮ್ಮ ಹೆಸರಿಗೆ ಮೊದಲೇ ಬದಲಾಯಿಸಿಕೊಂಡ ಮಾಲಕಿಗೆ ಇದರಿಂದ ಮತ್ತಷ್ಟು ಗಾಬರಿಯಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಸಹಿ ಫೋರ್ಜರಿ ಮಾಡಿ ವಿದ್ಯುತ್ ಸಂಪರ್ಕದಲ್ಲಿ ಹೆಸರು ಬದಲಾವಣೆ ಮಾಡಿರುವುದು ಗೊತ್ತಾಗಿದೆ.
ಇದೀಗ ಘಟನೆ ಸಂಬಂಧ ದೂರು ದಾಖಲಾಗಿರುವುದರಿಂದ ಯಾರದ್ದೋ ಮನೆಯಲ್ಲಿ ರಾಜನಂತೆ ಮೆರೆಯಲು ಬಂದವನು ಪೊಲೀಸ್ ಠಾಣೆಗೆ ಅಲೆದಾಡಬೇಕಾದ ಪ್ರಸಂಗ ಎದುರಾಗಿದೆ.