ನವದೆಹಲಿ, ಏ 01 (DaijiworldNews/DB): ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳುವ ಸಲುವಾಗಿ ಶುಕ್ರವಾರ ದೆಹಲಿಗೆ ಆಗಮಿಸಲಿದ್ದಾರೆ. ಪ್ರಧಾನಿಯಾದ ಬಳಿಕ ಇದು ಅವರ ಮೊದಲ ವಿದೇಶೀ ಭೇಟಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆಮಂತ್ರಣದ ಹಿನ್ನೆಲೆಯಲ್ಲಿ ಈ ಭೇಟಿ ನಡೆಯುತ್ತಿದೆ. ಮೊದಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ನೇಪಾಳ ಪ್ರಧಾನಿ ಭೇಟಿಯಾಗಲಿದ್ದು, ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಪತ್ನಿ ಡಾ. ಅರ್ಜು ದೇವುಬಾ ಹಾಗೂ ಉನ್ನತ ಮಟ್ಟದ ನಿಯೋಗವೂ ಅವರೊಂದಿಗೆ ಭಾರತ ಭೇಟಿ ಕೈಗೊಳ್ಳಲಿದೆ.
ದೆಹಲಿಯಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಳಿಕ ಉತ್ತರ ಪ್ರದೇಶದ ವಾರಣಾಸಿಗೆ ತೆರಳಲಿದ್ದಾರೆ. ಜುಲೈ 2021ರಲ್ಲಿ ಪ್ರಧಾನಿಯಾದ ಬಳಿಕ ಇದು ಅವರ ಮೊದಲ ವಿದೇಶಿ ಭೇಟಿಯಾಗಿದೆ ಎನ್ನಲಾಗಿದೆ.
ಭಾರತ ಮತ್ತು ನೇಪಾಳದ ಭಾಂದವ್ಯಕ್ಕೆ ದಶಕಗಳ ಇತಿಹಾಸವಿದೆ. ಉಭಯ ದೇಶಗಳ ಪಾಲುದಾರಿಕೆಯಿಂದಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಅಭ್ಯುದಯ ಕಂಡಿದೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ ಈ ಭೇಟಿ ಮಹತ್ವ ಪಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿರುವುದಾಗಿ ವರದಿಗಳು ಹೇಳಿವೆ.