ಬೆಂಗಳೂರು, ಏ 01 (DaijiworldNews/DB): ಅಪಹರಣ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಅಯ್ಯಪ್ಪ (35) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾಜಿ ಮಾಧ್ಯಮ ಸಲಹೆಗಾರ ಎನ್.ಎಸ್.ವಿನಯ್ ಅವರನ್ನು ಅಪಹರಿಸಲು ಈತ ಯತ್ನಿಸಿದ್ದ. 2017ರಲ್ಲಿ ಘಟನೆ ನಡೆದಿದ್ದು, ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ವಿನಯ್ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಇನ್ನೊಂದು ಕಾರಿನಲ್ಲಿ ಬಂದಿದ್ದ ಅಯ್ಯಪ್ಪ ಸಹಿತ ಸುಮಾರು ಐದು ಮಂದಿ ಆರೋಪಿಗಳು, ವಿನಯ್ ಕಾರಿಗೆ ಡಿಕ್ಕಿ ಹೊಡೆದಿದ್ದರು. ಕಾರು ನಿಲ್ಲಿಸಿದ ವಿನಯ್ ಕಾರಿಗೆ ಹಾನಿಯಾಗಿದೆಯೇ ಎಂದು ನೋಡುವಾಗ ಅವರನ್ನು ಅಪಹರಿಸಲು ಯತ್ನಿಸಿದ್ದರು. ಆದರೆ, ವಿನಯ್ ಆರೋಪಿಗಳನ್ನು ಪಕ್ಕಕ್ಕೆ ತಳ್ಳಿ ಓಡಿದ್ದರು. ಈ ವೇಳೆ ಸಾರ್ವಜನಿಕರೂ ಸೇರಿದ್ದರಿಂದ ಆರೋಪಿಗಳು ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಉಪವಿಭಾಗದ ಅಂದಿನ ಎಸಿಬಿ ಬಡಿಗೇರ್ ನೇತೃತ್ವದ ತಂಡ ಆರು ಮಂದಿ ಆರೋಪಿಗಳನ್ನು ಬಂಧಿಸಿತ್ತು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿಗಳನ್ನು ನಿರಂತರ ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಲಾಗಿತ್ತಾದರೂ, ಅಯ್ಯಪ್ಪ ತಲೆ ಮರೆಸಿಕೊಂಡಿದ್ದ.
ಈ ಕಾರಣಕ್ಕಾಗಿ ಆತನ ಕೋರ್ಟ್ ವಾರೆಂಟ್ ಜಾರಿಗೊಳಿಸಿತ್ತು.ಇದೀಗ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.