ಬೆಂಗಳೂರು, ಏ 01 (DaijiworldNews/MS): ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಐದು ತಿಂಗಳು ಕಳೆಯುತ್ತಿವೆ. ಆದರೆ, ಈ ರಾಜರತ್ನನ ನೆನಪು ಮಾತ್ರ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದು ಅಭಿಮಾನಿಗಳು ಪ್ರತಿದಿನವೂ ಸ್ಮರಿಸಿಕೊಂಡು ಅವರು ಮಾಡಿರುವ ಮಾನವೀಯ ಕಾರ್ಯಗಳನ್ನು ಕೊಂಡಾಡುತ್ತಿದ್ದಾರೆ. ಇದೀಗ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ ಕಾರ್ಯಕ್ರಮದ ಹಿನ್ನೆಲೆ ಕಾಂಗ್ರೆಸ್ ನಾಯಕ ಗುರುವಾರ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ರಾಹುಲ್ ಗಾಂಧಿ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಪ್ಪು ಫೋಟೋಗೆ ನಮನ ಸಲ್ಲಿಸಿದ್ದಾರೆ.ಈ ವೇಳೆ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಧೈರ್ಯದ ಮಾತುಗಳನ್ನ ಹೇಳಿದ್ದಾರೆ. ಇದರ ಜೊತೆಗೆ ರಾಘವೇಂದ್ರ ರಾಜ್ಕುಮಾರ್ಗೂ ರಾಹುಲ್ ಗಾಂಧಿ ಸಮಾಧಾನದ ಮಾತುಗಳನ್ನ ಹೇಳಿದ್ದಾರೆ. ರಾಹುಲ್ ಗಾಂಧಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಪುನೀತ್ ನಿವಾಸಕ್ಕೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. 15ಕ್ಕೂ ಅಧಿಕ ಪೊಲೀಸರು ಪುನೀತ್ ನಿವಾಸಕ್ಕೆ ಭದ್ರತೆ ನೀಡಿದ್ದರು.