ನವದೆಹಲಿ, ಮಾ. 31 (DaijiworldNews/DB): ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಡಚ್ ಭದ್ರತಾ ಸಲಹೆಗಾರರಾಗಿರುವ ಜೆಫ್ರಿ ವ್ಯಾನ್ ಲ್ಯೂವೆನ್ ಅವರು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಈ ವೇಳೆ ಪ್ರಸ್ತಾಪ ಮಾಡಿದರು. ಈಗ ಜಾಗತಿಕವಾಗಿ ನಡೆಯುತ್ತಿರುವ ಬೆಳವಣಿಗೆ ಆತಂಕಕಾರಿಯಾಗಿದೆ. ಈ ವಿಚಾರದಲ್ಲಿ ಉಭಯ ರಾಷ್ಟ್ರಗಳು ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಇದೆ. ಭಯೋತ್ಪಾದನೆಯ ನಿಗ್ರಹ, ದೇಶಗಳ ರಕ್ಷಣೆ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಪಾಲುದಾರಿಕೆ ಇನ್ನಷ್ಟು ವಿಸ್ತರಿಸಬೇಕು ಮುಂತಾದ ಚರ್ಚೆಗಳನ್ನು ಎರಡೂ ರಾಷ್ಟ್ರಗಳ ಪ್ರಮುಖರು ವಿನಿಮಯ ಮಾಡಿಕೊಂಡಿದ್ದಾರೆ.
ಉಕ್ರೇನ್ ನಲ್ಲಿ ಯದ್ದ ಗಂಭೀರ ಸ್ವರೂಪ ಪಡೆದಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರೊಂದಿಗೆ ಮಾತುಕತೆ ನಡೆಸಿ, ಉಕ್ರೇನ್ ಗೆ ಅಗತ್ಯ ನೆರವು ನೀಡುವ ಕುರಿತು ಪ್ರಸ್ತಾಪಿಸಿದ್ದರು. ಈ ನಡುವೆ ಉಕ್ರೇನ್ ಮೇಲೆ ದಿನೇದಿನೇ ರಷ್ಯಾದ ಆಕ್ರಮಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದೊಂದಿಗಿನ ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಡಚ್ ಸಂಸತ್ತಿಗೆ ಆಗ್ರಹಿಸಿದ್ದಾರೆ.