ಬೆಂಗಳೂರು, ಮಾ. 31 (DaijiworldNews/DB): ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಗಂಡಸ್ತನದ ಸವಾಲು ಹಾಕಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದೀಗ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆವೇಶದಲ್ಲಿ ಗಂಡಸ್ತನ ಪದ ಬಳಕೆ ಮಾಡಿದ್ದೇನೆ. ಅದರ ಬಗ್ಗೆ ಅನ್ಯತಾ ಭಾವಿಸುವುದು ಬೇಡ ಎಂದಿದ್ದಾರೆ.
ಶಾಂತಿಪ್ರಿಯ ಕರ್ನಾಟಕದಲ್ಲಿ ಯಾವುದೇ ವಿವಾದಗಳನ್ನು ಸೃಷ್ಟಿ ಮಾಡಬೇಡಿ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಸಿಎಂ ಬೊಮ್ಮಾಯಿ ಅವರಿಗೆ ಗಂಡಸ್ತನ ಇದ್ದರೆ ಹಲಾಲ್ ವ್ಯಾಪರದಲ್ಲಿ ಧರ್ಮ ಸಂಘರ್ಷ ಉಂಟಾಗದಂತೆ ತಡೆಯಿರಿ ಎನ್ನುತ್ತಾ ಗುರುವಾರ ಬೆಳಗ್ಗೆ ಅವರು ಸಿಎಂಗೆ ಗಂಡಸ್ತನದ ಸವಾಲು ಹಾಕಿದ್ದರು. ಆ ಬಳಿಕ ಬಿಜೆಪಿಯ ಕೆಲವು ನಾಯಕರು ಈ ಪದ ಬಳಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಎಚ್ ಡಿಕೆ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಆವೇಶದಲ್ಲಿ ಅಂತಹ ಹೇಳಿಕೆ ನೀಡಿದೆ. ತಪ್ಪು ತಿಳಿದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಕಳೆದ ಎರಡು ತಿಂಗಳಿನಲ್ಲಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ನಡೆಸಿಲ್ಲ. ಸರಕಾರ ಮೌನವಾಗಿರುವುದಕ್ಕೆ ಸಮಾಜದಲ್ಲಿ ಧರ್ಮದ ವಿಚಾರ ಹೆಚ್ಚುತ್ತಿದೆ. ಅದಕ್ಕಾಗಿ ಆಕ್ರೋಶದಲ್ಲಿ ಆ ಪದ ಬಳಕೆ ಮಾಡಿದ್ದೇನೆ. ಇದರಿಂದ ನೋವಾಗಿದ್ದಲ್ಲಿ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡುತ್ತೇನೆ. ಅದರೊಳಗೆ ಈಗ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೆ ಅಂತ್ಯ ಹಾಡಬೇಕು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಇರಬೇಕು. ಜಟ್ಕಾ, ಹಲಾಲ್ ಗೊಂದಲ ತತ್ ಕ್ಷಣ ಬಗೆಹರಿಯಲಿ ಎಂದು ಇದೇ ವೇಳೆ ಒತ್ತಾಯಿಸಿದರು.