ಬೆಂಗಳೂರು, ಮಾ. 31 (DaijiworldNews/DB): ಪತಿ-ಪತ್ನಿ ಕಲಹದಿಂದಾಗಿ ಬೇಸತ್ತು ಏಳು ವರ್ಷದ ಹಿಂದೆ ಮನೆಬಿಟ್ಟು ಹೋದ ಟೆಕ್ಕಿಯೊಬ್ಬ ಪತ್ನಿಯ ಮೊಬೈಲ್ ನಂಬರ್ ಲಿಂಕ್ ಆಗಿದ್ದ ಬ್ಯಾಂಕ್ ಖಾತೆಗೆ ಹಣ ಹಾಕಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಇದೀಗ ಟೆಕ್ಕಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ನಾಪತ್ತೆ ಕೇಸ್ ಗೆ ಷರಾ ಎಳೆದಿದ್ದಾರೆ.
ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಕೋಟೆಪ್ಪ ಎಂಬಾತ ಏಳು ವರ್ಷದ ಹಿಂದೆ ಸವಿತಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ವಿವಾಹದ ಬಳಿಕ ಸ್ವಲ್ಪ ಕಾಲ ಸರಿಯಾಗಿದ್ದ ದಾಂಪತ್ಯ ಜೀವನದಲ್ಲಿ, ಆನಂತರ ಕಲಹವೇ ಹೆಚ್ಚಿತ್ತು. ಪ್ರತಿದಿನ ಪತ್ನಿ ಜಗಳವಾಡುತ್ತಿದ್ದರಿಂದ ರೋಸಿ ಹೋಗಿದ್ದ ಕೋಟೆಪ್ಪ ಮನೆ ಬಿಟ್ಟು ಹೋಗಿ ಮತ್ತೆ ಮರಳಲಿಲ್ಲ. ಇದರಿಂದ ಆತಂಕಗೊಂಡಿದ್ದ ಪತ್ನಿ ಸವಿತಾ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಳು. ಆದರೆ ಪೊಲೀಸರಿಗೆ ಆತನ ಸುಳಿವೇ ಪತ್ತೆಯಾಗಿರಲಿಲ್ಲ. ಹೀಗಾಗಿ ಪೊಲೀಸರೂ ಸುಮ್ಮನಾಗಿದ್ದರು.
ಇತ್ತ ಪತ್ನಿ ಸವಿತಾ, ಕೋಟೆಪ್ಪ ಬದುಕಿಲ್ಲ ಎಂದೇ ಭಾವಿಸಿ ಏಕಾಂತ ಜೀವನ ನಡೆಸುತ್ತಿದ್ದಳು. ಆತನ ಊರಿನಲ್ಲಿಯೂ ಯಾರಿಗೂ ಆತನ ಬಗ್ಗೆ ಮಾಹಿತಿ ಇರಲಿಲ್ಲ. ಈ ನಡುವೆ ಮಾರ್ಚ್ 16 ರಂದು ಕೋಟೆಪ್ಪ 10 ಸಾವಿರ ರೂ. ಹಣ ಜಮಾವಣೆ ಮಾಡಿರುವ ಬಗ್ಗೆ ಸವಿತಾ ಮೊಬೈಲ್ ಗೆ ಸಂದೇಶ ಬಂದಿದೆ. ಈ ಹಿಂದೆ ಖಾತೆ ತೆರೆದಾಗ ಕೋಟೆಪ್ಪ ಸವಿತಾ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದ. ಇದು ತಿಳಿಯದೇ ಹಣ ಜಮೆ ಮಾಡಿದ್ದರಿಂದ ಕೋಟೆಪ್ಪ ಬದುಕಿರುವುದು ಸವಿತಾಳಿಗೆ ಗೊತ್ತಾಗಿದೆ.
ಈ ಸಂದೇಶ ಹಿಡಿದುಕೊಂಡು ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಸವಿತಾ ಪತಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾಳೆ. ಬಳಿಕ ಸಂದೇಶದ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದಾಗ ಕೋಟೆಪ್ಪ ಹಾವೇರಿಯಲ್ಲಿರುವುದು ತಿಳಿದು ಬಂದಿದೆ. ಕೋಟೆಪ್ಪನನ್ನು ಸಂಪರ್ಕಿಸಿದ ಪೊಲೀಸರು ನಾಪತ್ತೆ ಪ್ರಕರಣ ದಾಖಲಾದ ಬಗ್ಗೆ ತಿಳಿಸಿ ಠಾಣೆಗೆ ಬರಲು ಹೇಳಿದ್ದಾರೆ. ಆದರೆ, ಕೋಟೆಪ್ಪ ಠಾಣೆಗೆ ಬಂದು ಸಹಿ ಹಾಕಿ ಹಿಂತಿರುಗುತ್ತೇನೆ, ಆದರೆ ಹೆಂಡತಿ ಬಳಿ ಹೋಗುವುದಿಲ್ಲ ಎಂಬುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರೂ ಸಮ್ಮತಿ ಸೂಚಿಸಿದ್ದರಿಂದ ಆತನ ಹೇಳಿಕೆ ಪಡೆದು ನಾಪತ್ತೆ ಪ್ರಕರಣಕ್ಕೆ ಇದೀಗ ಅಂತ್ಯ ಹಾಡಿದ್ದಾರೆ.