ಮಡಿಕೇರಿ, ಮಾ. 31 (DaijiworldNews/DB): ಹಲಾಲ್ ಕಟ್ ಮಾಂಸ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಆ ಮಾಂಸವನ್ನು ಸೇವಿಸುವುದು, ಬಿಡುವುದು ಜನರಿಗೆ ಬಿಟ್ಟ ವಿಚಾರ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಮಡಿಕೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಹಲಾಲ್ ಮುಸ್ಲಿಂ ಸಮುದಾಯದ ಧಾರ್ಮಿಕ ಪದ್ಧತಿ. ಸರ್ಕಾರದ ನಿಯಮದಲ್ಲಿ ಅದು ಬರುವುದಿಲ್ಲ. ಹಾಗಂದ ಮೇಲೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮಧ್ಯಪ್ರವೇಶ ಮಾಡುವುದು ಸರಿಯಲ್ಲ ಎಂದರು.
ಹಲಾಲ್ ಕಟ್ ಎಂದರೇನೆಂದು ಈ ವಿಚಾರ ಮಾಧ್ಯಮಗಳಲ್ಲಿ ಬಂದ ಬಳಿಕವೇ ಹೆಚ್ಚಿನ ಮಂದಿಗೆ ಗೊತ್ತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಬೇಕಾದ ವಿಚಾರ ಎತ್ತುವ ಅಧಿಕಾರ ಜನರಿಗಿದ್ದು, ಇದನ್ನು ಜನರೇ ದೊಡ್ಡ ವಿಷಯವಾಗಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದವರು ತಿಳಿಸಿದರು.
ಇಷ್ಟವಿದ್ದವರು ಹಲಾಲ್ ಕಟ್ ಮಾಂಸವನ್ನು ಅಂಗಡಿಗಳಿಂದ ಖರೀದಿಸುತ್ತಾರೆ. ಇಷ್ಟವಿಲ್ಲದವರು ಬೇರೆ ಅಂಗಡಿಗಳನ್ನು ಹುಡುಕುತ್ತಾರೆ ಎಂದವರು ಇದೇ ವೇಳೆ ಹೇಳಿದರು.