ರಾಮನಗರ, ಮಾ. 31 (DaijiworldNews/DB): ವಿಶ್ವ ಹಿಂದೂ ಪರಿಷತ್, ಬಜರಂಗದಳದವರಿಗೆ ರೈತರ ಕಷ್ಟದ ಬದುಕು ತಿಳಿದಿಲ್ಲ. ದೇಶವನ್ನು ಹಾಳು ಮಾಡುವುದಕ್ಕೆ ಹಲಾಲ್ ಮಾಂಸ ಬಹಿಷ್ಕಾರದಂತಹ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಗುರುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದ ಅವರು, ಈ ಸಂಘಟನೆಗಳಲ್ಲಿ ಗುರುತಿಸಿಕೊಂಡವರು ಕಿಡಿಗೇಡಿಗಳು. ಅವರಿಗೆ ರೈತರ ಬದುಕು-ಬವಣೆ ಗೊತ್ತಿಲ್ಲ. ನಮ್ಮ ರೈತರು ಕತ್ತರಿಸುವ ಮಾಂಸವನ್ನು ಶುಚಿಗೊಳಿಸಲು, ರೇಷ್ಮೆ, ಮಾವು ಖರೀದಿಸಲು ಆ ಸಮಾಜದವರು ಬೇಕು. ಆದರೆ, ಇದೀಗ ಖ್ಯಾತೆ ತೆಗೆದು ದೇಶ ಹಾಳು ಮಾಡಲು ನೋಡುತ್ತಿದ್ದಾರೆ ಎಂದರು.
ಹಲಾಲ್ ಮಾಡಿದ ಮಾಂಸವನ್ನು ಇಷ್ಟು ದಿನ ಯಾವುದೇ ಆತಂಕವಿಲ್ಲದೆ ತಿಂದಿದ್ದೇವೆ. ಆದರೆ ನಾವು ಚೆನ್ನಾಗಿಯೇ ಇದ್ದೇವಲ್ಲ. ದೇವರು ಏನಾದರೂ ಮೆಚ್ಚದೇ ಇದ್ದನೇ ಎಂದವರು ಇದೇ ವೇಳೆ ಪ್ರಶ್ನಿಸಿದರು.