ಶ್ರೀ ಶೈಲ, ಮಾ. 31 (DaijiworldNews/DB): ಕರ್ನಾಟಕ ಮೂಲದ ವ್ಯಕ್ತಿಗೆ ಆಂಧ್ರ ಪ್ರದೇಶದ ಪುಣ್ಯ ಕ್ಷೇತ್ರ ಶ್ರೀ ಶೈಲದಲ್ಲಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಗುಂಪು ಘರ್ಷಣೆ ಸಂಭವಿಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿಯ ಯುವಕ ಸಹಿತ ಕೆಲವರು ಶ್ರೀಶೈಲಕ್ಕೆ ಪಾದಯಾತ್ರೆ ತೆರಳಿದ್ದರು. ಈ ವೇಳೆ ಹೋಟೆಲೊಂದರಲ್ಲಿ ನೀರಿನ ಬಾಟಲಿಗೆ ಹೆಚ್ಚಿನ ದರ ಪಡೆದುಕೊಂಡಿದ್ದನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ಕನ್ನಡಿಗನಿಗೆ ಇರಿತ ನಡೆಸಲಾಗಿತ್ತು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮತ್ತು ಕನ್ನಡಿಗರ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕರ್ನಾಟಕದವರ ಮೇಲೆ ದಾಳಿ ನಡೆಸಿ, ವಾಹನಗಳಿಗೂ ಹಾನಿ ಮಾಡಿದ ಘಟನೆ ನಡೆದಿದೆ. ಅಲ್ಲದೆ ಸ್ಥಳದಲ್ಲಿ ಕಲ್ಲು ತೂರಾಟವೂ ನಡೆದಿದೆ. ಇದರಿಂದ ಇಬ್ಬರು ಕನ್ನಡಿಗರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಶ್ರೀಶೈಲಕ್ಕೆ ಆಗಮಿಸಿದ ಕರ್ನಾಟಕದ ಭಕ್ತಾದಿಗಳಿಗೆ ರಕ್ಷಣೆ ನೀಡುವಂತೆ ಅಲ್ಲಿನ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ವಿಧಾನಸಭೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಆಂಧ್ರದ ಅಧಿಕಾರಿಗಳೊಂದಿಗೆ ಬುಧವಾರ ರಾತ್ರಿಯಿಂದಲೇ ಸಂಪರ್ಕದಲ್ಲಿದ್ದೇನೆ. ಸದ್ಯ ಅಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಕನ್ನಡಿಗರು ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸಿಎಂ ಜೊತೆ ಮಾತನಾಡಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಕರ್ನೂಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ ರೆಡ್ಡಿ ಅವರೊಂದಿಗೆ ಈಗಾಗಲೇ ಸಚಿವ ಮುರುಗೇಶ್ ನಿರಾಣಿ ಮಾತನಾಡಿದ್ದಾರೆ ಎಂದವರು ತಿಳಿಸಿದರು.