ಬೆಂಗಳೂರು, ಮಾ 31 (DaijiworldNews/MS): ಮುಂದಿನ ಲೋಕಸಭೆ ಚುನಾವಣೆ ವೇಳೆ ಸಂಸದೆ ಸುಮಲತಾ ಅಂಬರೀಶ್ ವಿರುದ್ದ ನನ್ನ ಪುತ್ರ ನಿಖಿಲ್ ಅವರನ್ನು ನಿಲ್ಲಿಸುವ ಯೋಚನೆ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳು ಉದ್ದೇಶಿಸಿ ಮಾತನಾಡಿದ ಅವರು, ನಾನು ಸಂಸದೆ ಸುಮಲತಾ ಅವರ ಹೇಳಿಕೆಗಳನ್ನು ಬಹಳಷ್ಟು ಬಾರಿ ಗಮನಿಸುತ್ತಾ ಬಂದಿದ್ದೇನೆ. ನಮ್ಮ ಬಗ್ಗೆ ಅವರು ಆಡಿರುವ ಮಾತುಗಳಿಗೆ ಮಂಡ್ಯ ಜಿಲ್ಲೆಯ ಜನರೇ ಉತ್ತರ ನೀಡುತ್ತಾರೆ. ಈ ಬಗ್ಗೆ ನಂಬಿಕೆ ಇದೆ. ಅಂದು ಕುತಂತ್ರ ರಾಜಕಾರಣದಿಂದ ನಿಖಿಲ್ ಕುಮಾರಸ್ವಾಮಿ ಸೋಲಿಸಿದರು. ಅವರ ಹೇಳಿಕೆಯನ್ನು ಗಮನಿಸಿದಾಗ ನಿಖಲ್ ಅವರನ್ನು ಮತ್ತೆ ಸುಮಲತಾ ಅವರ ವಿರುದ್ದ ನಿಲ್ಲಿಸುವ ಮನಸ್ಸಾಗಿದೆ . ಹೀಗಾಗಿ ಈ ಬಗ್ಗೆ ನಾನು ಯೋಚನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಡುವೆ ಮಂಡ್ಯದಲ್ಲಿ ನಡೆದ ಜಿದ್ದಾಜಿದ್ದಿನ ಪೈಪೋಟಿ ಎಲ್ಲರಿಗೂ ತಿಳಿದಿದೆ. ಈ ಚುನಾವಣೆಯಲ್ಲಿ ಸುಮಲತಾ ಅವರು ಗೆಲುವು ಸಾಧಿಸಿ ಸಂಸದರಾಗಿದ್ದರು.
ಇತ್ತೀಚೆಗೆ ಸಂಸದೆ ಸುಮಲತಾ ಅವರು, " ನಿಖಿಲ್ ಕುಮಾರಸ್ವಾಮಿ ಅವರ ಪಕ್ಷ, ತಾತಾ, ತಂದೆ ಹೆಸರು ಬಿಟ್ಟು ಜಿಲ್ಲಾ ಪಂಚಾಯತ್ ಚುನಾವಣೆ ಗೆಲ್ಲಲ್ಲಿ, ಗೆದ್ದ ಬಂದು ಆಮೇಲೆ ನನಗೆ ಸಲಗೆ ನೀಡಲಿ " ಎಂದು ಸುಮಲತಾ ಸವಾಲು ಹಾಕಿದ್ದರು.