ನವದೆಹಲಿ, ಮಾ. 31 (DaijiworldNews/DB): ಗೂಂಡಾಗಿರಿ ನಡೆಸಿ ದೇಶದ ಪ್ರಗತಿ ಸಾಧಿಸುವುದು ಆಡಳಿತ ಪಕ್ಷಕ್ಕೆ ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನೆಯ ಸ್ವತ್ತುಗಳಿಗೆ ಹಾನಿಗೊಳಿಸಿರುವುದು ಅಕ್ಷಮ್ಯ. ದೇಶದ ಅತಿದೊಡ್ಡ ಮತ್ತು ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷವೊಂದರ ಕಾರ್ಯಕರ್ತರು ಈ ರೀತಿ ಗೂಂಡಾಗಿರಿ ಮಾಡಿದರೆ, ಆ ಪಕ್ಷ ದೇಶದ ಯುವಕರಿಗೆ ಎಂತಹ ಸಂದೇಶ ನೀಡಬಹುದು ಎಂಬುದನ್ನು ಊಹಿಸಿ ಎಂದವರು ಹೇಳಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬದಲು ಅದನ್ನು ಯುಟ್ಯೂಬ್ಗೆ ಹಾಕಿದರೆ ಜನ ಉಚಿತವಾಗಿಯೇ ವೀಕ್ಷಿಸಬಹುದು ಎಂದು ಈ ಹಿಂದೆ ಕೇಜ್ರೀವಾಲ್ ಹೇಳಿದ್ದರು. ಈ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬುಧವಾರ ಕೇಜ್ರೀವಾಲ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಿವಾಸದ ಮುಂಭಾಗದಲ್ಲಿದ್ದ ಬ್ಯಾರಿಯರ್ ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಧ್ವಂಸ ಮಾಡಿ, ಪ್ರವೇಶದ್ವಾರದ ಗೇಟ್ ಗೆ ಕೇಸರಿ ಬಣ್ಣ ಬಳಿದಿದ್ದರು.