ಬೆಂಗಳೂರು, ಮಾ. 31 (DaijiworldNews/DB): ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನುದ್ದೇಶಿಸಿ ‘ಧಾರ್ಮಿಕ ವಿಭಜನೆಯನ್ನು ಪರಿಹರಿಸಿ’ ಎಂದು ಮಾಡಿರುವ ಟ್ವೀಟ್ ಗೆ ಮುಖ್ಯಮಂತ್ರಿಯವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವನ್ನು ಒಂದೆಡೆ ಕುಳಿತು ಚರ್ಚಿಸಿ ಪರಿಹರಿಸಲು ಸಾಧ್ಯವಿದೆ ಎಂಬುದಾಗಿ ಅವರು ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಕೋಮುವಾದವನ್ನು ನಾವು ದೂರ ತಳ್ಳಬೇಕು. ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕ ಪ್ರೀತಿಸುತ್ತದೆ. ಐಟಿ-ಬಿಟಿ ಕೋಮುವಾದವಾದರೆ ನಮ್ಮ ಜಾಗತಿಕ ನಾಯಕತ್ವವನ್ನೇ ನಾಶಪಡಿಸುತ್ತದೆ. ಹೀಗಾಗಿ ಈಗ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಲು ನೀವು ಗಮನ ನೀಡಬೇಕು ಎಂದು ಸಿಎಂಗೆ ಅವರು ಟ್ವೀಟ್ ಮಾಡಿದ್ದರು. ಅಲ್ಲದೆ ಸ್ವಲ್ಪ ಸಮಯದ ಬಳಿಕ ಇನ್ನೊಂದು ಟ್ವೀಟ್ ಮಾಡಿ ನಮ್ಮ ರಾಜ್ಯದ ಸಿಎಂ ಪ್ರಗತಿಪರ ನಾಯಕನಾದ್ದರಿಂದ ಅವರು ಈ ಸಮಸ್ಯೆ ಬಗೆಹರಿಸುವಲ್ಲಿ ಖಂಡಿತಾ ತೊಡಗಿಸಿಕೊಳ್ಳುತ್ತಾರೆಂಬ ನಂಬಿಕೆ ಇದೆ ಎಂದಿದ್ದರು.
ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಗೆ ಸಂಬಂಧಿಸಿದಂತೆ ಗುರುವಾರ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಹೈಕೋರ್ಟ್ ತೀರ್ಪಿನ ನಂತರ ಕೆಲವು ಸಮಸ್ಯೆಗಳು ಬಗೆಹರಿದಿವೆ. ನಂಬಿಕೆಗಳ ಮೇಲೆ ಬದುಕು ನಡೆಸುವ ನಾವು ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ನಮ್ಮ ರಾಜ್ಯ ಪ್ರಗತಿ ಮತ್ತು ಶಾಂತಿ, ಸೌಹಾರ್ದದ ನಾಡು. ಇಂತಹ ಹೆಗ್ಗಳಿಕೆ ಹೊಂದಿರುವ ಕರ್ನಾಟಕಕ್ಕೆ ಧಕ್ಕೆ ಆಗದ ರೀತಿಯಲ್ಲಿ ಎಲ್ಲಾ ಧರ್ಮದವರೂ ಸಂಯಮದಿಂದ ನಡೆದುಕೊಳ್ಳಬೇಕು. ಒಂದೆಡೆ ಕುಳಿತು ಚರ್ಚಿಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.