ಕೊಪ್ಪಳ, ಮಾ. 31 (DaijiworldNews/DB): ಹಿಜಾಬ್ ಬಗ್ಗೆ ತುಟಿ ಪಿಟಿಕ್ ಎನ್ನದ ಬುದ್ದಿಜೀವಿಗಳು ಈಗ ಹಲಾಲ್ ಬಗ್ಗೆ ಕರಪತ್ರ ಹಂಚುತ್ತಿದ್ದಾರೆ. ಅವರಿಗೆ ಯಾವಾಗ ಮಾತನಾಡಬೇಕು, ಯಾವ ಸಮಯದಲ್ಲಿ ಮೌನವಾಗಿರಬೇಕೆಂಬುದೇ ತಿಳಿದಿಲ್ಲ. ಮತ್ತೆ ಅವರನ್ನು ಬುದ್ದಿಜೀವಿಗಳು ಎನ್ನುವುದಾದರೂ ಯಾಕೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುದ್ದಿಜೀವಿಗಳೆನಿಸಿಕೊಂಡವರು ದೇಶದ ಬಗ್ಗೆ ಯೋಚನೆ ಮಾಡುವ ಬುದ್ದಿವಂತರಲ್ಲ ಎಂದರು.
ಶಾಲಾ ಕಾಲೇಜಿನಲ್ಲಿ ಸಮವಸ್ತ್ರ ನಿಯಮ ಜಾರಿಗೊಳಿಸಿದ್ದು ಬಿಜೆಪಿ ಸರ್ಕಾರವಲ್ಲ. ಬ್ರಿಟಿಷರ ಕಾಲದಲ್ಲೇ ಈ ನಿಯಮ ಅಸ್ತಿತ್ವದಲ್ಲಿತ್ತು. ಆದರೆ ಈ ಬಗ್ಗೆ ಮಾತನಾಡದೆ ಮೌನವಹಿಸಿದ ಬುದ್ದಿಜೀವಿಗಳು ಹಲಾಲ್ ವಿಚಾರವಾಗಿ ಕರಪತ್ರ ಹಂಚಲು ಹೊರಟಿದ್ದಾರೆ. ಇದರ ಬದಲಾಗಿ ನ್ಯಾಯಾಲಯ ತೀರ್ಪು ಒಪ್ಪದವರಿಗೆ ಅವರು ಬುದ್ದಿ ಹೇಳುವ ಕೆಲಸ ಮಾಡಬೇಕಿತ್ತು. ದೇಶದ ಭವಿಷ್ಯದ ಬಗ್ಗೆ ಅವರಿಗೆ ಯಾವುದೇ ಕಳಕಳಿ ಇಲ್ಲ ಎಂದು ವ್ಯಂಗ್ಯವಾಡಿದರು.
ಹಲಾಲ್, ಜಟ್ಕಾ ಮುಂತಾದವು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ವಿವಾದ ಶೀಘ್ರ ಸರಿಯಾಗುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು.
ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಮಾತುಗಳು ಓಟ್ ಬ್ಯಾಂಕ್ ಗಾಗಿ ಅಷ್ಟೇ. ಆದರೆ ಅದರಿಂದ ಮತ ಪಡೆಯುವ ಬದಲು ಹಿನ್ನಡೆಯನ್ನೇ ಅನುಭವಿಸುತ್ತಾರೆ. ಅವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.