ನವದೆಹಲಿ, ಮಾ. 31 (DaijiworldNews/DB): ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ಈ ಹಿಂದೆ ಆಡಿದ್ದ ಮಾತಿನ ಕುರಿತಂತೆ ಪತ್ರಕರ್ತನೋರ್ವನ ಪ್ರಶ್ನೆಗೆ ಯೋಗಗುರು ಬಾಬಾ ರಾಮ್ ದೇವ್ ಗರಂ ಆದ ಪ್ರಸಂಗ ಹರ್ಯಾಯಣದ ಕರ್ನಾಲ್ ನಲ್ಲಿ ನಡೆಯಿತು.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಬಾ ರಾಮದೇವ್ ಅವರನ್ನುದ್ದೇಶಿಸಿ ಪತ್ರಕರ್ತನೋರ್ವ, ಪೆಟ್ರೋಲ್ ಗೆ 40 ರೂ. ಮತ್ತು ಅಡುಗೆ ಅನಿಲಕ್ಕೆ 300 ರೂ. ನಿಗದಿಪಡಿಸುವ ಭರವಸೆ ನೀಡಿದ ಸರ್ಕಾರವನ್ನು ಜನಸಾಮಾನ್ಯರು ಗಣನೆಗೆ ತೆಗೆದುಕೊಳ್ಳಬೇಕು ಎಂದ ಬಗ್ಗೆ ನಿಮ್ಮ ಈಗಿನ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಬಾಬಾ ರಾಮ್ ದೇವ್, ಹೌದು, ನಾನು ಹೇಳಿದ್ದೆ, ನೀವೇನು ಮಾಡುತ್ತೀರಿ? ಇಂತಹ ಪ್ರಶ್ನೆಗಳನ್ನುಇನ್ನು ಮುಂದೆ ಕೇಳಬೇಡಿ. ಪದೇಪದೇ ಉತ್ತರಿಸುವುದಕ್ಕೆ ನಾನು ನಿಮ್ಮ ಗುತ್ತಿಗೆದಾರನಲ್ಲ ಎಂದು ಉತ್ತರಿಸಿದರು.
ಪತ್ರಕರ್ತ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿದಾಗ, ಸುಮ್ಮನೆ ಕುಳಿತುಕೊಳ್ಳಿ. ನಾನು ಹೇಳಿದ್ದೆ, ಅದರಿಂದ ನೀವೇನು ಮಾಡುತ್ತೀರಿ. ಪದೇ ಪದೇ ಈ ಪ್ರಶ್ನೆ ಕೇಳಿದರೆ ಒಳ್ಳೆಯದಲ್ಲ. ಉತ್ತಮ ಹೆತ್ತವರಿಗೆ ಒಳ್ಳೆಯ ಪುತ್ರನಾಗಿ ಎಂದು ಗರಂ ಆಗಿ ನುಡಿದರು.
ಜನ ಕಷ್ಟದ ದಿನಗಳಲ್ಲಿ ಕಠಿಣ ಪರಿಶ್ರಮ ಮಾಡಬೇಕು. ನಾನು ಮುಂಜಾನೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತೇನೆ ಎಂದ ಅವರು, ಇಂಧನ ಬೆಲೆ ಇಳಿಕೆಯಾದಲ್ಲಿ ಸರಕಾರದ ಬೊಕ್ಕಸದಲ್ಲಿ ತೆರಿಗೆ ಸಂಗ್ರಹ ಆಗುವುದಿಲ್ಲ. ತೆರಿಗೆ ಸಂಗ್ರಹವಾಗದಿದ್ದಲ್ಲಿ ದೇಶವನ್ನು ಮುನ್ನಡೆಸುವುದು ಹೇಗೆ? ನೌಕರರಿಗೆ ಸಂಬಳ ಒದಗಿಸುವುದು ಹೇಗೆ? ರಸ್ತೆಗಳನ್ನು ನಿರ್ಮಿಸುವುದು ಹೇಗೆ? ಹಣದುಬ್ಬರ ಇಳಿಕೆಯಾಗಿ ಹಣಕಾಸಿನ ಸಮಸ್ಯೆ ತಲೆ ದೋರುತ್ತದೆ ಎಂದು ತಿಳಿಸಿದರು.