ಬೆಂಗಳೂರು, ಮಾ 31 (DaijiworldNews/DB): ವಿಮಾನದಲ್ಲಿಟ್ಟಿದ್ದ ತನ್ನ ಲಗೇಜ್ ನ್ನು ಮರಳಿ ಪಡೆಯಲು ಟೆಕ್ಕಿಯೋರ್ವ ವಿಮಾನಯಾನ ಸಂಸ್ಥೆಯ ವೆಬ್ ಸೈಟ್ ನ್ನೇ ಹ್ಯಾಕ್ ಮಾಡಿದ್ದಾರೆ.
ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ನಂದನ್ ಕುಮಾರ್ ಪಾಟ್ನಾದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ನಂದನ್ ಬ್ಯಾಗ್ ನ್ನೇ ಹೋಲುವ ಇನ್ನೊಂದು ಬ್ಯಾಗ್ ಕೂಡಾ ವಿಮಾನದಲ್ಲಿದ್ದು, ಆಕಸ್ಮಿಕವಾಗಿ ಸಹ ಪ್ರಯಾಣಿಕ ತನ್ನ ಬ್ಯಾಗ್ ಎಂದು ಸಹ ಪ್ರಯಾಣಿಕನ ಬ್ಯಾಗ್ ನ್ನು ಒಯ್ದಿದ್ದಾರೆ. ಬ್ಯಾಗ್ ಕಳೆದುಕೊಂಡ ಟೆಕ್ಕಿ ನಂದನ್ ಗೆ ದಿಕ್ಕು ತೋಚದೆ ಕೊನೆಗೆ ತನ್ನ ಡೆವಲಪರ್ ಕೌಶಲಗಳನ್ನು ಬಳಸಿಕ ವಿಮಾನಯಾನ ಸಂಸ್ಥೆಯ ವೆಬ್ ಸೈಟ್ ನ್ನು ಹ್ಯಾಕ್ ಮಾಡಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ನಂದನ್ ಕುಮಾರ್, ತಾನು ಬ್ಯಾಗ್ ನ್ನು ಮರಳಿ ಪಡೆಯಲು ಪಟ್ಟ ಕಷ್ಟವನ್ನು ವಿವರಿಸಿದ್ದಾರೆ. ಅಲ್ಲದೆ, ಇಂಡಿಗೋ ಸಂಸ್ಥೆಯ ಲೋಪಗಳನ್ನೂ ಬರೆದುಕೊಂಡಿದ್ದಾರೆ. ಸಂಸ್ಥೆಗೆ ಸಂಬಂಧಿಸಿದವರಿಗೆ ಹೇಳಿದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕೊನೆಗೆ ವೆಬ್ ಸೈಟ್ ನ್ನೇ ಹ್ಯಾಕ್ ಮಾಡಬೇಕಾಗಿ ಬಂತು. ತನ್ನ ಕಂಪ್ಯೂಟರ್ ಕೀ ಬೋರ್ಡ್ ನಲ್ಲಿ ಎಫ್ 12ನ್ನು ಒತ್ತಿ ಇಂಡಿಗೋ ವೆಬ್ ಸೈಟ್ ನಲ್ಲಿ ಡೆವಲಪರ್ ಕನ್ಸೋಲ್ ತೆರೆದೆ. ಬಳಿಕ ನೆಟ್ ವರ್ಕ್ ಲಾಗ್ ದಾಖಲೆಯೊಂದಿಗೆ ಚೆಕ್ ಇನ್ ಮಾಡಿದೆ. ಆ ಬಳಿಕ ತನ್ನ ಬ್ಯಾಗ್ ಕೊಂಡೊಯ್ದ ಪ್ರಯಾಣಿಕನ ಪಿಎನ್ ಆರ್ ಸಂಖ್ಯೆಯನ್ನು ವಿವರಗಳನ್ನು ಕ್ರೋಢೀಕರಿಸಿದೆ. ಇದರಿಂದಾಗಿ ಬ್ಯಾಗ್ ನ್ನು ಮರಳಿ ಪಡೆಯಲು ನನಗೆ ಸಾಧ್ಯವಾಯಿತು ಎಂದು ಬರೆದುಕೊಂಡಿದ್ದಾರೆ.