ನವದೆಹಲಿ, ಮಾ 31 (DaijiworldNews/DB): ದುಬೈ ಮತ್ತು ಅಬುಧಾಬಿಗೆ ಮಾ. 31ರಿಂದ ಎ. 6ರ ನಡುವೆ ಪ್ರವಾಸ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ದುಬೈಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ವಿಶೇಷ ಆಹ್ವಾನಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ಅನುಮತಿ ನೀಡುವಂತೆ ಅವರು ಹೈಕೋರ್ಟ್ ಗೆ ನ್ಯಾಯವಾದಿ ಮಾಯಾಂಕ್ ಜೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿಯನ್ನು ಪುರಸ್ಕರಿಸಿದ ನ್ಯಾ| ಆಶಾ ಮೆನನ್ ಅವರನ್ನೊಳಗೊಂಡ ನ್ಯಾಯಪೀಠವು ನಿಗದಿ ಪಡಿಸಿದ ದಿನಾಂಕದೊಳಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದೆ. ವಿದೇಶ ಪ್ರವಾಸದಿಂದ ಹಿಂತಿರುಗಿದ ಬಳಿಕ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂಬುದನ್ನೂ ತಿಳಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದ ಡಿ.ಕೆ. ಶಿವಕುಮಾರ್, 2019ರ ಅಕ್ಟೋಬರ್ನಲ್ಲಿ ಜೈಲಿನಿಂದ ಬಿಡುಗಡೆಯಾಗುವ ಸಂದರ್ಭ ವಿದೇಶ ಪ್ರವಾಸ ಮಾಡದಂತೆ ಷರತ್ತು ವಿಧಿಸಲಾಗಿತ್ತು.