ನವದೆಹಲಿ, ಮಾ 31 (DaijiworldNews/MS): "ಬಿಜೆಪಿ ತನ್ನ ಸಿದ್ಧಾಂತಗಳು, ನಾಯಕತ್ವದ ಜನಪ್ರಿಯತೆ ಮತ್ತು ನಮ್ಮ ಸರ್ಕಾರದ ಕಾರ್ಯಕ್ಷಮತೆಯ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸಲು ಮತ್ತು ಎಲ್ಲೆಡೆ ಗೆಲ್ಲಲು ಬಯಸುತ್ತದೆ ಹೊರತು ಪ್ರತಿಸ್ಪರ್ಧಿಗಳ ವಿರುದ್ಧ ಹಿಂಸಾಚಾರ ನಡೆಸುವ ಮೂಲಕ ಅಲ್ಲ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ (ತಿದ್ದುಪಡಿ) ಮಸೂದೆ–2022 ಕುರಿತು ಲೋಕಸಭೆಯಲ್ಲಿ ಬುಧವಾರ ನಡೆದ ಚರ್ಚೆ ವೇಳೆ ಎಲ್ಲಾ ಪಕ್ಷದ ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿ ಮಾತನಾಡಿದ ಅಮಿತ್ ಶಾ ಅವರು, ಪ್ರತಿಸ್ಪರ್ಧಿ ಪಕ್ಷಗಳ ಕಾರ್ಯಕರ್ತರನ್ನು ಕೊಂದು ಅಧಿಕಾರವನ್ನು ಹಿಡಿಯಲು ನಾವು ಎಂದಿಗೂ ಬಯಸುವುದಿಲ್ಲ. ನಾವು ವಿರೋಧ ಪಕ್ಷಗಳ ಕಾರ್ಯಕರ್ತರನ್ನು ಹತ್ಯೆ ಮಾಡುವ, ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಮೂಲಕ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಇಚ್ಛಿಸುವುದಿಲ್ಲ ಇದು ನಮ್ಮ ಸಂಸ್ಕೃತಿಯಲ್ಲ" ಎಂದಿದ್ದಾರೆ.
ಇದೇ ವೇಳೆ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದ ಸೌಗತ್ ರಾಯ್ ಕೇಂದ್ರ ಸರ್ಕಾರದ ಕುರಿತು ಮಾಡಿದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, 'ನೀವು ಗೋವಾಗೆ ಏಕೆ ಹೋಗುತ್ತೀರಿ, ತ್ರಿಪುರಾಕ್ಕೆ ಏಕೆ ಹೋಗುತ್ತೀರಿ? ನಿಮಗೆ ಅಲ್ಲಿಗೆ ಹೋಗುವ ಹಕ್ಕು ಇದೆ. ಹೋಗಬೇಡಿ ಎಂದು ನಾನು ಹೇಳುವುದಿಲ್ಲ. ಪ್ರತಿಯೊಂದು ಪಕ್ಷವೂ ತನ್ನದೇ ಸಿದ್ಧಾಂತ, ಕಾರ್ಯಕ್ರಮಳೊಂದಿಗೆ ಎಲ್ಲ ಕಡೆಗೆ ಹೋಗಬೇಕು. ಅದೇ ಪ್ರಜಾಪ್ರಭುತ್ವದ ಸೊಬಗು' ಎಂದಿದ್ದಾರೆ.
ಇದೇ ವೇಳೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿನ ಸಜೀವ ದಹನ ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಟಿಎಂಸಿ, ಕುಟುಂಬಗಳಿಗಾಗಿಯೇ ನಡೆಯುತ್ತಿರುವ ಪಕ್ಷಗಳಾಗಿವೆ ಎಂದಿರುವ ಶಾ, 'ಮೊದಲು ನಿಮ್ಮ ಪಕ್ಷದೊಳಗೆ ಚುನಾವಣೆ ನಡೆಸಿ, ನಂತರ ದೇಶದ ಬಗ್ಗೆ ಮಾತನಾಡಿ' ಎಂದೂ ತಿರುಗೇಟು ನೀಡಿದ್ದಾರೆ.