ನವದೆಹಲಿ, ಮಾ 30 (DaijiworldNews/DB): ಪಂಜಾಬ್ ನಲ್ಲಿ ಎಎಪಿಯ ಗೆಲುವು ಮತ್ತು ಬಿಜೆಪಿಯ ಸೋಲಿನಿಂದಾಗಿ ಹತಾಶೆಗೊಳಗಾಗಿರುವ ಬಿಜೆಪಿಯು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಕೊಲೆ ಮಾಡಲು ಬಯಸುತ್ತಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, 'ದಿ ಕಾಶ್ಮೀರ್ ಫೈಲ್ಸ್' ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ಯುವಮೂರ್ಚಾವು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರ ನಿವಾಸದ ಮೇಲೆ ದಾಳಿ ಮಾಡಿ ಪ್ರವೇಶದ್ವಾರಕ್ಕೆ ಕೇಸರಿ ಬಣ್ಣ ಬಳಿದು, ಸಿಸಿಟಿವಿಯನ್ನು ಧ್ವಂಸಗೊಳಿಸಿದೆ. ಆ ಪಕ್ಷಕ್ಕೆ ಪಂಜಾಬ್ ನಲ್ಲಿನ ಸೋಲಿನಿಂದ ಹತಾಶೆ ಉಂಟಾಗಿದೆ. ಕೇಜ್ರೀವಾಲ್ ಅವರನ್ನು ಸೋಲಿಸಲು ಅಸಾಧ್ಯವಾದ ಕಾರಣ ಅವರ ಕೊಲೆಗೆ ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇಂದಿನ ದಾಳಿ ಪೂರ್ವಯೋಜಿತವಾಗಿದೆ. ಸೋಲಿಸಲು ಸಾಧ್ಯವಾಗದಕ್ಕೆ ಹತ್ಯೆ ಯತ್ನ ಇದಾಗಿದೆ. ಬಿಜೆಪಿ ದಾಳಿ ನಡೆಸಿರುವುದರ ವಿರುದ್ಧ ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ ಎಂದವರು ಇದೇ ವೇಳೆ ತಿಳಿಸಿದರು.
ಪಂಜಾಬ್ ಸೋಲಿನಿಂದಾಗಿ ಬಿಜೆಪಿಗೆ ಎಎಪಿ ಮೇಲೆ ಭಯ ಹುಟ್ಟಿದೆ. ಅದಕ್ಕಾಗಿ ಇಂತಹ ಯತ್ನಗಳನ್ನು ಮಾಡುತ್ತಿದ್ದಾರೆ. ಘಟನೆ ನಡೆದಾಗ ದೆಹಲಿ ಪೊಲೀಸರು ಏನು ಮಾಡುತ್ತಿದ್ದರು ಎಂದು ಪಂಜಾಬ್ ಸಿಎಂ ಭಗವಂತ ಮಾನ್ ಟ್ವೀಟರ್ ನಲ್ಲಿ ಪ್ರಶ್ನಿಸಿದ್ದಾರೆ.