ನವದೆಹಲಿ, ಮಾ 30 (DaijiworldNews/DB): ಪಶ್ಚಿಮ ಬಂಗಾಳದಲ್ಲಿ ಅಮಾಯಕರ ಹತ್ಯೆ, ಬೆದರಿಕೆಯಂತಹ ಘಟನೆಗಳು ಪದೇಪದೇ ನಡೆಯುತ್ತಿದೆ. ಆದರೆ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಇಂತಹ ಘಟನೆಗಳ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿರ್ಭೂಮ್ ನಲ್ಲಿ ಎಂಟು ಮಂದಿ ಅಮಾಯಕರನ್ನು ಥಳಿಸಿ ಸಜೀವದಹನ ಮಾಡಲಾಗಿದೆ. ಬಿಜೆಪಿ ಶಾಸಕರ ಮೇಲೆ ಟಿಎಂಸಿ ನಾಯಕರಿಂದ ಹಲ್ಲೆ ನಡೆದಿದೆ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬಾರದು ಎಂಬುದಾಗಿ ಟಿಎಂಸಿ ಶಾಸಕರು ಬೆದರಿಕೆಯೊಡ್ಡಿದ್ದಾರೆ. ಇಂತಹ ಘಟನೆಗಳು ಪದೇ ಪದೇ ನಡೆದರೂ ಅಲ್ಲಿನ ಮುಖ್ಯಮಂತ್ರಿ ಮೌನ ವಹಿಸಿದ್ದಾರೆ. ಈ ಘಟನೆಗಳ ಬಗ್ಗೆ ಅವರು ಏನು ಕ್ರಮ ಕೈಗೊಂಡಿದ್ದಾರೆಯೋ ಗೊತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿಯನ್ನು ದೂಷಿಸಿ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಿರಿ ಎಂದು ಇದೇ ವೇಳೆ ಸಿ.ಟಿ. ರವಿ, ಮಮತಾ ಬ್ಯಾನರ್ಜಿ ಅವರಿಗೆ ಲೇವಡಿ ಮಾಡಿದ್ದಾರೆ.