ಜಮ್ಮು ಕಾಶ್ಮೀರ, ಮಾ 30 (DaijiworldNews/DB): ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೊರೆ ನಗರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಬಂಕರ್ ಮೇಲೆ ಬುರ್ಖಾಧಾರಿ ಮಹಿಳೆಯೊಬ್ಬಳು ಬಾಂಬ್ ಎಸೆದಿರುವ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈಕೆ ರಸ್ತೆಯ ಮಧ್ಯಭಾಗದಲ್ಲಿ ನಿಂತುಕೊಂಡು ತನ್ನ ಪರ್ಸ್ ನೊಳಗೆ ಇಟ್ಟಿದ್ದ ಬಾಂಬ್ ಹೊರತೆಗೆದು ಸಿಆರ್ ಪಿಎಫ್ ಬಂಕರ್ ಮೇಲೆ ಎಸೆದು ತತ್ ಕ್ಷಣ ಅಲ್ಲಿಂದ ಪರಾರಿಯಾಗಿರುವುದು ಸಿಸಿಟಿವಿ ದಾಖಲೆಯಲ್ಲಿ ಸೆರೆಯಾಗಿದೆ ಎಂಬುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಬಾಂಬ್ ಕ್ಯಾಂಪ್ ನ ಹೊರಭಾಗದಲ್ಲಿ ಬಿದ್ದು ಸ್ಫೋಟಗೊಂಡಿದೆ. ಹೀಗಾಗಿ ಸಂಭಾವ್ಯ ಅಪಾಯ ತಪ್ಪಿದೆ. ಘಟನೆ ಬೆನ್ನಲ್ಲೇ ಭದ್ರತಾ ಪಡೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ. ಆದರೆ ಬಾಂಬ್ ಎಸೆದ ಮಹಿಳೆಯ ಗುರುತು ಇನ್ನಷ್ಟೆ ಪತ್ತೆಯಾಗಬೇಕಿದೆ. ಆಕೆಯ ಪತ್ತೆಗೆ ವಿಶೇಷ ಶೋಧ ಕಾರ್ಯ ಮುಂದುವರಿದಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ.