ನವದೆಹಲಿ, ಮಾ 30 (DaijiworldNews/DB): ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೈಡ್ರೋಜನ್ ಚಾಲಿತ ಕಾರಿನಲ್ಲಿ ಬುಧವಾರ ಸಂಸತ್ತಿಗೆ ಆಗಮಿಸಿ ಗಮನ ಸೆಳೆದಿದ್ದಾರೆ.
ಸಚಿವರು ತಮ್ಮ ನಿವಾಸದಿಂದ ಸಂಸತ್ತಿಗೆ ಹೈಡ್ರೋಜನ್ ಕಾರಿನಲ್ಲಿ ಬಂದಿದ್ದಾರೆ. ಭಾರತದ ಮೊದಲ ಪರಿಸರಸ್ನೇಹಿ ಹೈಡ್ರೋಜನ್ ಚಾಲಿತ ಕಾರು ಇದಾಗಿದೆ. ಈ ಕುರಿತು ಅವರು ತಮ್ಮ ಟ್ವಿಟರ್ ಖಾತೆಯಲ್ಲಿಯೂ ಹಂಚಿಕೊಂಡಿದ್ದು, ಇದು ಭಾರತದ ಭವಿಷ್ಯ ಎಂಬುದಾಗಿ ಹೇಳಿದ್ದಾರೆ.
ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಈ ಕಾರು ಮಹತ್ವದ ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ಹೈಡ್ರೋಜನ್ ಚಾಲಿತ ಕಾರಿನ ಸಂಚಾರ ಹೆಚ್ಚಲಿದೆ ಎಂಬ ವಿಶ್ವಾಸ ಅವರದಾಗಿದೆ. 'ಸ್ವಾವಲಂಬಿ ಭಾರತವಾಗುವತ್ತ ಇದು ಒಂದು ದಿಟ್ಟ ಹೆಜ್ಜೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ಕಾರಿನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.