ಬೆಳಗಾವಿ, ಮಾ 30 (DaijiworldNews/MS): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಅದಿರು ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣ ಸಂಬಂಧ ಇಲ್ಲಿನ ಕೋಕಾ ನ್ಯಾಯಾಲಯವು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿಯನ್ನು ದೋಷಿಗಳು ಎಂದು ಮಹತ್ವದ ತೀರ್ಪು ಪ್ರಕಟಿಸಿದೆ .ಘಟನೆ ನಡೆದು ಬರೋಬ್ಬರಿ 9 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಇದು ರಾಜ್ಯದ ಮೊದಲ ಕೋಕಾ ಪ್ರಕರಣವಾಗಿದೆ.
ಏಪ್ರಿಲ್ 4ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದ್ದಾರೆ. ಪ್ರಕರಣದ 6, 11 ಹಾಗೂ 16ನೇ ಆರೋಪಿಗಳನ್ನು ನಿರ್ದೋಷಿಗಳು ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಆರನೇ ಆರೋಪಿ ಕೇರಳದ ರಬ್ದಿನ್ ಫಿಚೈ, 11 ನೇ ಆರೋಪಿ ಬೆಂಗಳೂರಿನ ಮಹ್ಮದ್ ಶಾಬಂದರಿ ಹಾಗೂ 16 ನೇ ಆರೋಪಿ ಉತ್ತರ ಕನ್ನಡದ ಆನಂದ ರಮೇಶ್ ನಾಯಕ ಈ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ
ಉಳಿದಂತೆ ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ, ಐದನೇ ಆರೋಪಿ ಕೇರಳದ ಕೆ.ಎಂ ಇಸ್ಮಾಯಿಲ್, ಏಳನೇ ಆರೋಪಿ ಹಾಸನದ ಮಹೇಶ ಅಚ್ಚಂಗಿ, ಎಂಟನೇ ಆರೋಪಿ ಕೇರಳದ ಸಂತೋಷ ಎಂ.ಬಿ, ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, ಹತ್ತನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12 ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ್ ಕಶ್ಯಪ್ ದೋಷಿಗಳೆಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. 2013ರ ಡಿಸೆಂಬರ್ 21ರಂದು ಅಂಕೋಲಾದಲ್ಲಿ ನಡೆದ ಆರ್.ಎನ್. ನಾಯಕ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕೋಕಾ ಕೇಸ್ ದಾಖಲಿಸಲಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕಮಠ ಹಾಗೂ ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವಾ ವಕಾಲತ್ತು ವಹಿಸಿದ್ದರು.
ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಆರ್.ಎನ್. ನಾಯಕ ಅದಿರು ಉದ್ಯಮಿಯೂ ಆಗಿದ್ದರು. ಈ ಕಾರಣಕ್ಕೆ ಬನ್ನಂಜೆ ರಾಜಾ ಆರ್.ಎನ್. ನಾಯಕ ಅವರನ್ನು ಟಾರ್ಗೆಟ್ ಮಾಡಿ 3 ಕೋಟಿ ರೂ. ಹಫ್ತಾ ನೀಡದಿದ್ದರೆ ಪ್ರಾಣ ತೆಗೆಯುವ ಬೆದರಿಕೆಯನ್ನು ಆರ್.ಎನ್. ನಾಯಕಗೆ ಹಾಕಿದ್ದ. ಈ ಸಂಬಂಧ ಆರ್.ಎನ್. ನಾಯಕ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದರು. ಹಫ್ತಾ ನೀಡದಿರುವುದಕ್ಕೆ 2013ರ ಡಿಸೆಂಬರ್ 21 ರಂದು ಆರ್.ಎನ್. ನಾಯಕ ಅವರನ್ನು ಹತ್ಯೆ ಮಾಡಲಾಗಿತ್ತು. ಉತ್ತರ ಪ್ರದೇಶ ಮೂಲದ ಶಾರ್ಪ್ ಶೂಟರ್ ವಿವೇಕ್ ಉಪಾಧ್ಯಾಯ ಎಂಬಾತ ಆರ್.ಎನ್. ನಾಯಕ ಅವರನ್ನು ಗುಂಡಿಕ್ಕಿ ಕೊಲೆಗೈಯುತ್ತಾನೆ. ಸ್ಥಳದಲ್ಲಿದ್ದ ಆರ್.ಎನ್ ನಾಯಕ ಅವರ ಗನ್ ಮ್ಯಾನ್ ರಮೇಶ್ ಗೌಡ ಕೂಡ ವಿವೇಕ್ ಉಪಾಧ್ಯಾಯನನ್ನು ಅಟ್ಟಿಸಿಕೊಂಡು ಹೋಗಿ ಗುಂಡಿಕ್ಕಿ ಹತ್ಯೆ ನಡೆಸಿದ್ದ.