ಬೆಂಗಳೂರು, ಮಾ 30 (DaijiworldNews/DB): ಯುವತಿಯೋರ್ವಳನ್ನು ಊಟಕ್ಕೆ ಮನೆಗೆ ಕರೆದು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ರಾಷ್ಟ್ರಮಟ್ಟದ ನಾಲ್ವರು ಈಜುಪಟುಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದೆಹಲಿ ಮೂಲದ ರಜತ್ (23), ಶಿವ್ ರಾಣಾ (22), ದೇವ್ ಸರೋಯಿ (25) ಹಾಗೂ ಯೋಗೇಶ್ ಕುಮಾರ್ (26) ಎಂದು ಗುರುತಿಸಲಾಗಿದೆ.
ಡೇಟಿಂಗ್ ಆಪ್ ನಲ್ಲಿ ಪರಿಚಯವಾದ ಪಶ್ಚಿಮ ಬಂಗಾಲ ಮೂಲದ ಯುವತಿಯನ್ನು ಮಾ. 24ರಂದು ಸಂಜಯನಗರದ ಮನೆಗೆ ಆರೋಪಿಗಳು ಊಟದ ನೆಪದಲ್ಲಿ ಕರೆಸಿಕೊಂಡಿದ್ದರು. ಈ ವೇಳೆ ಮನೆಗೆ ಆಗಮಿಸಿದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಂತ್ರಸ್ತೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ವಸಂತನಗರದಲ್ಲಿರುವ ಆಸ್ಪತ್ರೆ ಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಕೆ ಡೇಟಿಂಗ್ ಆಪ್ ನಲ್ಲಿ ತನ್ನ ಪ್ರೊಫೈಲ್ ತೆರೆದಿದ್ದು, ತನ್ನನ್ನು ಸಂಪರ್ಕಿಸುವ ಯುವಕರ ಜೊತೆ ಆಕೆ ಡೇಟಿಂಗ್ ಹೋಗುತ್ತಿದ್ದಳು ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಆರೋಪಿಗಳು ಈಜು ಸ್ಪರ್ಧೆಗೆ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದು, ಸಂಜಯನಗರದಲ್ಲಿ ವಾಸವಾಗಿದ್ದರು. ಆರೋಪಿಗಳ ಪೈಕಿ ರಜತ್ ಅದೇ ಆಪ್ ಮೂಲಕ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದು, ಇನ್ ಸ್ಟಾಗ್ರಾಂನಲ್ಲಿಯೂ ಚಾಟಿಂಗ್ ಮಾಡುತ್ತಿದ್ದ. ಮೊಬೈಲ್ ನಂಬರ್ ಕೂಡಾ ಪರಸ್ಪರ ಹಂಚಿಕೊಂಡಿದ್ದರು. ಬಳಿಕ ಹೊಟೇಲಿಗೆ ಊಟಕ್ಕೆ ಕರೆಸಿಕೊಂಡು ಆನಂತರ ಹೊಟೇಲ್ ಬದಲಾಗಿ ಮನೆಯಲ್ಲೇ ಊಟ ಮಾಡೋಣ ಎಂದು ಆನ್ ಲೈನ್ ನಲ್ಲಿ ಊಟ ತರಿಸಿಕೊಂಡಿದ್ದಾನೆ. ಐವರು ಒಟ್ಟಿಗೆ ಊಟ ಮಾಡಿ ಮದ್ಯ ಸಹ ಸೇವಿಸಿದ್ದಾರೆ. ತಡರಾತ್ರಿಯಾದ ಕಾರಣ ಆಕೆ ಅಲ್ಲೇ ಮಲಗಿದ್ದು, ಈ ವೇಳೆ ನಾಲ್ವರೂ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ.