ಶಿಗ್ಗಾವಿ, ಮಾ 30 (DaijiworldNews/DB): ಹೃದಯಾಘಾತದಿಂದ ತಾಯಿ ಮೃತಪಟ್ಟ ನೋವಲ್ಲೇ ಮಗ ಎಸೆಸ್ಸೆಲ್ಸಿ ಪರೀಕ್ಷೆ ಬರೆದ ಮನಕಲಕುವ ಘಟನೆ ಶಿಗ್ಗಾವಿಯಲ್ಲಿ ನಡೆದಿದೆ.
ಶಿಗ್ಗಾವಿ ತಾಲ್ಲೂಕಿನ ಹನುಮರಹಳ್ಳಿ ಗ್ರಾಮದ ವಿದ್ಯಾರ್ಥಿ ಯಶವಂತ ಅವರ ತಾಯಿ ಸರಸ್ವತಿ ಸಂಶಿ (40) ಮಂಗಳವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಒಂದೆಡೆ ತಾಯಿ ನಿಧನ, ಇನ್ನೊಂದೆಡೆ ಜೀವನದ ಪ್ರಮುಖ ಘಟ್ಟ ಎಸೆಸ್ಸೆಲ್ಸಿ ಪರೀಕ್ಷೆ ಇದ್ದ ಕಾರಣ ವಿದ್ಯಾರ್ಥಿಗೆ ಸ್ಥೈರ್ಯ ತುಂಬುವ ಕೆಲಸವನ್ನು ಬಿಇಓ ತಂಡ ಮಾಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯು ಜೆಎಂಜೆ ಪ್ರೌಢಶಾಲೆಯಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಬಂದು ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದಿದ್ದಾರೆ. ಬಳಿಕ ತಾಯಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿ ತಂದೆ ಉಮೇಶ ಸಂಶಿ, ಪತ್ನಿ ಕಳೆದೊಂದು ವಾರದಿಂದ ತಲೆಯ ಪಾರ್ಶಿ ರೋಗದಿಂದ ಬಳಲುತ್ತಿದ್ದರು. ಮಂಗಳವಾರ ಹಠಾತ್ ಹೃದಯಾಘಾತವಾಗಿದೆ. ಮಗನ ಶೈಕ್ಷಣಿಕ ಭವಿಷ್ಯ ಹಾಳಾಗಬಾರದೆಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಮನವರಿಕೆ ಮಾಡಿದ್ದೇನೆ ಎಂದು ಭಾವುಕರಾದರು.