ನವದೆಹಲಿ, ಮಾ 30 (DaijiworldNews/DB): ಪದೇಪದೇ ಇಂಧನ ದರ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಜನರ ಬೆವರಿನ ಹಣದ ಮೇಲೆ ಮೋದಿ ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಆರೋಪಿಸಿದ್ದಾರೆ.
ಇಂಧನ ದರ ಏರಿಕೆ ಕುರಿತು ಟ್ವೀಟ್ ಮಾಡಿರುವ ಅವರು, ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇದು ಜನರನ್ನು ಸುಲಿಗೆ ಮಾಡುವುದಕ್ಕೆ ಸಮಾನ. ಜನ ಕಷ್ಟ ಪಟ್ಟು ದುಡಿದ ಬೆವರಿನ ಹಣದ ಮೇಲೆ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ. ಜನರ ಜೀವನ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆಪಾದನೆ ಮಾಡಿದ್ದಾರೆ.
ಕಳೆದ ಒಂಬತ್ತು ದಿನಗಳಲ್ಲಿ ಎಂಟು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಇದು ಸುಲಿಗೆಯಲ್ಲದೆ ಮತ್ತಿನ್ನೇನು? ಇದಕ್ಕೆ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿಯವರೇ ಹೊಣೆಯಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.