ನವದೆಹಲಿ, ಮಾ 30 (DaijiworldNews/DB): ಕಾಶ್ಮೀರಿ ಹಿಂದೂಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಲಘು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದೆಹಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೇಜ್ರೀವಾಲ್ ಮನೆಗೆ ದಾಳಿ ನಡೆಸಿದ್ದಾರೆ. ಅಲ್ಲದೆ, ಮನೆಯ ಗೇಟ್ ಗೆ ಕೇಸರಿ ಬಣ್ಣ ಬಳಿದು ಪ್ರತಿಭಟಿಸಿದ ಘಟನೆ ನಡೆದಿದೆ.
ಕಾಶ್ಮೀರಿ ಹಿಂದೂಗಳ ಕುರಿತು ಅರವಿಂದ ಕೇಜ್ರೀವಾಲ್ ಅವರು ಕೇವಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಿಎಂ ನಿವಾಸದ ಮೂರು ಬ್ಯಾರಿಕೇಡ್ ದಾಟಿ ಮುಖ್ಯದ್ವಾರಕ್ಕೆ ತಲುಪಿ ಪ್ರತಿಭಟನೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮರಾಗಳಿಗೆ ಹಾನಿಯಾಗಿದೆ ಎಂದು ಆಮ್ ಆದ್ಮಿ ಪಕ್ಷ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದೆ. ಗೇಟ್ ಗೆ ಕೇಸರಿ ಬಣ್ಣ ಬಳಿದಿರುವ ಬಗ್ಗೆಯೂ ಈ ಫೋಟೋದಲ್ಲಿ ತಿಳಿಸಲಾಗಿದೆ.
ಪ್ರತಿಭಟನಾಕಾರರನ್ನು ತಡೆಯಲು ದೆಹಲಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.
ಪ್ರತಿಭಟನೆಯಲ್ಲಿ ತೇಜಸ್ವಿ ಸೂರ್ಯ, ಚಾಹಲ್, ವೈಭವ್ ಸಿಂಗ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು. ಸಿಎಂ ಕೇಜ್ರೀವಾಲ್ ವಿರುದ್ಧ ಘೋಷಣೆಗಳು ಕೂಗಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಬಸ್ಸಿನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.