ಹೈದರಾಬಾದ್, ಮಾ 30 (DaijiworldNews/MS): ಹೈದರಾಬಾದ್ನಲ್ಲಿ 85 ವರ್ಷದ ವೃದ್ದರೊಬ್ಬರು ಲಾಕರ್ ರೂಂ ಒಳಗೆ ಲಾಕ್ ಆದ ಆದ ಘಟನೆ ಮಾರ್ಚ್ 28ರ ಸೋಮವಾರ ನಡೆದಿದೆ. ಬ್ಯಾಂಕ್ ಸಿಬ್ಬಂದಿಗಳು ಆಕಸ್ಮಿಕವಾಗಿ ಲಾಕ್ ಮಾಡಿದ ಪರಿಣಾಮ ಇಡೀ ರಾತ್ರಿ ಬ್ಯಾಂಕ್ ಲಾಕರ್ ರೂಂನೊಳಗೆ ಕಳೆದಿದ್ದ 85 ವರ್ಷದ ವೃದ್ದನನ್ನು ಮಂಗಳವಾರ ಬೆಳಗ್ಗೆ ರಕ್ಷಿಸಲಾಗಿದೆ.
ಜುಬಿಲಿ ಹಿಲ್ಸ್ ರಸ್ತೆಯ ನಿವಾಸಿಯಾದ ವಿ. ಕೃಷ್ಣಾ ರೆಡ್ಡಿ ಅವರು ಸೋಮವಾರ ಸಂಜೆ 4:30 ರ ಸುಮಾರಿಗೆ ಬ್ಯಾಂಕ್ ಗೆ ತೆರಳಿದ್ದು ಅಲ್ಲಿ ಲಾಕರ್ ಕೊಠಡಿಯಲ್ಲಿ ಲಾಕ್ ಆದ ಪರಿಣಾಮ ತೀವ್ರ ಆಘಾತಕ್ಕೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
ವಿ ಕೃಷ್ಣಾ ರೆಡ್ಡಿ ಜುಬಿಲಿ ಹಿಲ್ಸ್ ಚೆಕ್ ಪೋಸ್ಟ್ ಬಳಿಯ ಯೂನಿಯನ್ ಬ್ಯಾಂಕ್ಗೆ ವಿ ಕೃಷ್ಣಾ ರೆಡ್ಡಿ ಲಾಕರ್ ನಲ್ಲಿಟ್ಟಿದ್ದ ಕೆಲವೊಂದು ದಾಖಲೆಯನ್ನು ತೆಗೆದುಕೊಂಡು ಬರಲು ತೆರಳಿದ್ದರು. ಪರಿಶೀಲನೆಯ ನಂತರ ರೆಡ್ಡಿ ಅವರನ್ನು ಲಾಕರ್ ರೂಂನೊಳಗೆ ಕಳುಹಿಸಲಾಗಿತ್ತು. ಆದರೆ ಬ್ಯಾಂಕ್ ಕೆಲಸದ ಮುಕ್ತಾಯದ ಅವಧಿ ಬಗ್ಗೆ ರೆಡ್ಡಿ ಅವರ ಗಮನಕ್ಕೆ ಬಂದಿರಲಿಲ್ಲ. ಮತ್ತೊಂದೆಡೆ ಬ್ಯಾಂಕ್ ಭದ್ರತಾ ಸಿಬ್ಬಂದಿ ಕೂಡ ರೆಡ್ಡಿಯವರು ಒಳಗಿರುವುದನ್ನು ಗಮನಿಸಿಲ್ಲ, ಬ್ಯಾಂಕ್ ಕೆಲಸದ ಸಮಯ ಮುಕ್ತಾಯಗೊಂಡಿದ್ದರಿಂದ ಸಿಬಂದಿಗಳು ಬ್ಯಾಂಕ್ ಗೆ ಬೀಗ ಹಾಕಿ ತೆರಳಿಬಿಟ್ಟಿದ್ದರು.
ಇತ್ತ ರಾತ್ರಿಯಾದರೂ ರೆಡ್ಡಿಯವರು ಮನೆಗೆ ಬಾರದಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿ, ಹಲವೆಡೆ ಹುಡುಕಾಡಿ ಕೊನೆಗೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮರುದಿನ ಮಂಗಳವಾರ ಬೆಳಗ್ಗೆ ನೌಕರರು ಬ್ಯಾಂಕ್ ತೆರೆದಾಗ 10:30 ರ ಸುಮಾರಿಗೆ ಬ್ಯಾಂಕ್ನಲ್ಲಿ ಕೃಷ್ಣಾ ರೆಡ್ಡಿಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಜುಬಿಲಿ ಹಿಲ್ಸ್ ಪೊಲೀಸರು ಸ್ಥಳಕ್ಕೆ ಧಾವಿಸಿ ಮಧುಮೇಹ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ವಿ ಕೃಷ್ಣಾ ರೆಡ್ಡಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಘಟನೆಗೆ ಬ್ಯಾಂಕ್ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.