ಬೆಂಗಳೂರು, ಮಾ 30 (DaijiworldNews/MS): ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ, ಟಿಪ್ಪು ಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಭಾರತಕ್ಕಾಗಿ ಬೆವರು ಸುರಿಸಿಲ್ಲ. ಟಿಪ್ಪು ಇತಿಹಾಸ ತಾಲಿಬಾನ್, ಐಸಿಸ್ ಮತಾಂಧರಷ್ಟೇ ಘೋರ ಎಂದು ರಾಜ್ಯ ಬಿಜೆಪಿ ಘಟಕವು ಅಪಾದಿಸಿದೆ.
ಈ ಕುರಿತು ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ ರಾಜಸತ್ತೆಯ ಸೃಷ್ಟಿಕರ್ತರು. ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ?’ ಎಂದು ಪ್ರಶ್ನಿಸಿದೆ.
‘ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು? ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ?’ ಎಂದು ಬಿಜೆಪಿ ಕೇಳಿದೆ.
‘ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ. ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ ಮತಾಂಧನಿಗೆ ಮೈಸೂರು ಹುಲಿ ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ. ನೈಜತೆ ಬಯಲಾಗಲೇಬೇಕಲ್ಲವೇ?’ ಎಂದು ಬಿಜೆಪಿ ಟ್ವೀಟಿಸಿದೆ.
ಮತಾಂಧ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದು ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ವಿನಃ ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸುವುದಕ್ಕಲ್ಲ. ಟಿಪ್ಪು ಮಾತ್ರವಲ್ಲ ಶಾಲಾ ಪಠ್ಯಕ್ರಮದಲ್ಲಿ ಸೇರಿದ ಎಲ್ಲಾ ಸುಳ್ಳು ಇತಿಹಾಸಗಳ ಪರಿಷ್ಕರಣೆಯಾಗಬೇಕು.ಇತಿಹಾಸ ಎಂದರೆ "ಹೀಗೆ ಇತ್ತು" ಎಂಬ ರೀತಿಯ ವಾಸ್ತವ ಸತ್ಯದಲ್ಲಿರಬೇಕೇ ಹೊರತು ಸುಳ್ಳಿನಿಂದ ಕೂಡಿರಬಾರದು.ಆದರೆ ಈಗ ನಾವು ಓದುತ್ತಿರುವ ಇತಿಹಾಸ, "ಕಾಂಗ್ರೆಸ್ ಕೈಪಿಡಿ"! ಎಂದು ದೂರಿದೆ.
ಟಿಪ್ಪು ಕಾಲವೆಂದರೆ ಅದು ಹಿಂದೂ ಮತ್ತು ಕ್ರೈಸ್ತರ ದೌರ್ಭಾಗ್ಯದ ಕಾಲ.ಜನಾನುರಾಗಿಯಾಗಿದ್ದ ಮೈಸೂರು ಒಡೆಯರನ್ನು ಕಪಟ ಮಾರ್ಗದ ಮೂಲಕ ಅಧಿಕಾರದಿಂದ ಕೆಳಕ್ಕೆ ಇಳಿಸಿದರು. ಹಿಂದೂಗಳು ಮೂರನೇ ದರ್ಜೆಯ ಪ್ರಜೆಗಳಾಗಿದ್ದರು.ನೆತ್ತರಕೆರೆಯಲ್ಲಿ ಸಾವಿರಾರು ಕ್ರೈಸ್ತರ ಹತ್ಯೆ. ಟಿಪ್ಪು ಇತಿಹಾಸ ಎಂದರೆ ಅದು ತಾಲೀಬಾನ್, ಐಸಿಸ್ ಮತಾಂಧರಷ್ಟೇ ಘೋರ. ಕಾಶ್ಮೀರದಲ್ಲಿ ಮತಾಂಧರು ನಡೆಸಿದ ನರಮೇಧವನ್ನೂ ಮೀರಿದ ಕೃತ್ಯವನ್ನು ಟಿಪ್ಪು ನಡೆಸಿದ್ದಾನೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಸತ್ಯವನ್ನು ಮುಚ್ಚಿಟ್ಟು ಉದಾತ್ತ, ಸ್ವಾತಂತ್ರ್ಯ ವೀರ ಎಂದು ಬಣ್ಣಿಸುವುದು ದೇಶದ ಇತಿಹಾಸಕ್ಕೆ ಮಾಡುವ ಅಪಮಾನ ಎಂದು ಆರೋಪಿಸಿದೆ.