ಬೆಂಗಳೂರು, ಮಾ 30 (DaijiworldNews/DB): ಸಾಮಾಜಿಕ ಜಾಲತಾಣದಲ್ಲಿ ಹಲಾಲ್ ಮಾಂಸ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಚೋದನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಚೋದನೆ ಯಾರೇ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಪೊಲೀಸರು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿದ್ದಾರೆ ಎಂದರು.
ಒಂದು ಸಮುದಾಯ ಹಲಾಲ್ ಮಾಡದೆ ಮಾಂಸ ಮಾರಾಟ ಮಾಡುವುದಿಲ್ಲ ಎಂದರೆ, ಇನ್ನೊಂದು ಸಮುದಾಯ ಹಲಾಲ್ ಮಾಂಸ ನಮ್ಮ ದೇವರಿಗೆ ಆಗುವುದಿಲ್ಲ ಎನ್ನುತ್ತದೆ. ಇಂತಹ ವಿಚಾರಗಳೇ ವಿವಾದಕ್ಕೆ ಎಡೆ ಮಾಡಿಕೊಡುತ್ತದೆ. ಯಾವುದೇ ರೀತಿಯ ಪ್ರಚೋದನೆಯನ್ನು ಯಾರೂ ಮಾಡಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.