ರಾಮನಗರ, ಮಾ 30 (DaijiworldNews/DB): ರಾಷ್ಟ್ರೀಯ ಪಕ್ಷಗಳೆರಡು ರಾಜ್ಯಕ್ಕೆ ಹಲವಾರು ರೀತಿಯಲ್ಲಿ ಅನ್ಯಾಯ ಎಸಗಿವೆ. ಈ ಅನ್ಯಾಯದ ವಿರುದ್ಧ ನಾನು ಹೋರಾಟ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೀಗ ಚುನಾವಣಾ ಕಾವು ಶುರುವಾಗಿದೆ. ಇನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನ ನಾಯಕರು ರಾಜ್ಯಕ್ಕೆ ಮತ ಭೇಟೆಗೆ ಬರುವುದು ಸಾಮಾನ್ಯ. ಆದರೆ ರಾಜ್ಯದ ಜನತೆಯಲ್ಲಿ ಅವರು ಮತ ಯಾಚಿಸುವ ಮುನ್ನ ಇಲ್ಲಿನ ಜನರ ಸಮಸ್ಯೆ ನಿವಾರಣೆಗೆ ಒತ್ತು ನೀಡಬೇಕು. ನದಿ ನೀರಿನ ಸಮಸ್ಯೆ ಪರಿಹರಿಸಬೇಕಾದ ಬಹಳ ಮುಖ್ಯ ಕೆಲಸ ಅವರ ಮುಂದಿದೆ ಎಂದರು.
ಹಲಾಲ್ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆ ನಡೆದಿಲ್ಲ. ಅವಕಾಶ ಸಿಕ್ಕಲ್ಲಿ ಖಂಡಿತಾ ಇದರ ಬಗ್ಗೆ ಧ್ವನಿ ಎತ್ತುತ್ತೇನೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸುವುದು ಅತೀ ಅವಶ್ಯವಾಗಿದ್ದು, ಈ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದವರು ತಿಳಸಿದರು.
ಗುಜರಾತ್ ಚುನಾವಣೆ ಜೊತೆಯಲ್ಲೇ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಥವಾ ಎಪ್ರಿಲ್ ನಲ್ಲಿಯೂ ನಡೆಯುವ ಸಾಧ್ಯತೆ ಇದೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾದರೂ ಅದನ್ನು ಎದುರಿಸಲು ಜೆಡಿಎಸ್ ಸಿದ್ಧವಾಗಿದೆ ಎಂದು ಎಚ್ ಡಿಕೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.