ಬೆಂಗಳೂರು, ಮಾ 30 (DaijiworldNews/MS): ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಎಲ್ಲಾ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿದ್ದು , ಆರೋಪ- ಪ್ರತ್ಯಾರೋಪಗಳು ಕೂಡಾ ತೀವ್ರವಾಗಿವೆ. ಬಿಜೆಪಿ ಪಕ್ಷವೂ ’ಮಹಾದೇವಪುರ ಕ್ಷೇತ್ರದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆ ಪೋಸ್ಟರ್ ನಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಅವಕಾಶ ನೀಡಿಲ್ಲ ’ ಎಂದು ಟ್ವೀಟ್ ಮಾಡಿ ಲೇವಡಿ ಮಾಡಿತ್ತು.
ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಕಾಂಗ್ರೆಸ್ ರಾಜ್ಯ ಘಟಕ, " ಬಿಜೆಪಿ ಅಂದರೆ ಮನೆಮುರುಕರ ಕೂಟ! ಒಡೆದಾಳುವುದೇ ಅವರ ನೀತಿ, ಜಾತಿ, ಧರ್ಮ, ಭಾಷೆಗಳ ಹೆಸರಲ್ಲಿ ಕಲಹ ಸೃಷ್ಟಿಸಿದ್ದಲ್ಲದೆ ಕಾಂಗ್ರೆಸ್ ಗೂಡಿಗೆ ಕೈ ಹಾಕುವ ವಿಫಲ ಯತ್ನ ಮಾಡುತ್ತಿದೆ. ನಕಲಿ ಸೃಷ್ಟಿಗೆ ಹೆಸರಾದ ಬಿಜೆಪಿ ಕರ್ನಾಟಕ, ಅರ್ಧ ಚಿತ್ರ ಹಾಕಿ ಅಪಹಾಸ್ಯಕ್ಕೆ ಈಡಾಗುವ ಬದಲು ರಾಜ್ಯದ ಸಮಸ್ಯೆಗಳತ್ತ ನೋಡಿ. ಅಸಲಿ ಫೋಟೋ ನೋಡಿ ಸಂತೋಷಪಡಲಿ! " ಎಂದು ಟಾಂಗ್ ನೀಡಿದೆ.
ಮತ್ತೊಂದು ಟ್ವೀಟ್ ನಲ್ಲಿ ಬೊಮ್ಮಾಯಿಯವರೇ, ಹಿಜಾಬ್, ವ್ಯಾಪಾರ ನಿರ್ಬಂಧ, ಭಗವದ್ಗೀತೆ, ಟಿಪ್ಪು ಪಠ್ಯ, ಹಲಾಲ್. ಇನ್ನೂ ಅದೆಷ್ಟು ಭಾವನಾತ್ಮಕ ವಿಷಯಗಳನ್ನ ಮುಂದೆ ಬಿಡುತ್ತಿರೋ ಬೇಗ ಮುಗಿಸಿ ಎಂದು ಕಿಡಿಕಾರಿದೆ.
ರಾಜ್ಯದ ಅಸಲಿ ಸಮಸ್ಯೆಗಳನ್ನು, ನಿಮ್ಮ 40% ಭ್ರಷ್ಟಾಚಾರವನ್ನು, ನಿಮ್ಮ ವೈಫಲ್ಯವನ್ನು ಚರ್ಚಿಸಬೇಕಿದೆ. ಚುನಾವಣೆಗಾಗಿ ಭಾವನೆಗಳನ್ನು ಕೆದಕದೆ, ನಿಮ್ಮ ಸಾಧನೆಗಳನ್ನು ಮುಂದಿಡಿ ಎಂದು ಕಾಂಗ್ರೆಸ್ ಸಲಹೆ ನೀಡಿದೆ.