ಬೆಂಗಳೂರು, ಮಾ 29 (DaijiworldNews/DB): ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ನಾಗರಭಾವಿಯಲ್ಲಿರುವ ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಷನ್ ಅಂಡ್ ಸೋಸಿಯಲ್ ಸ್ಟಡೀಸ್ ಸಂಸ್ಥೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಿಂದ ಯಡಿಯೂರಪ್ಪ ಅವರು ಕಾನೂನು ಬಾಹಿರವಾಗಿ 116 ಎಕರೆ ಭೂಮಿ ಮಂಜೂರು ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 136. 76 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಅಲ್ಲದೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಸ್ವಾಧೀನದಲ್ಲಿದ್ದ ಜಮೀನಿನ ಪೈಕಿ ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಷನ್ ಅಂಡ್ ಸೋಸಿಯಲ್ ಸ್ಟಡೀಸ್ ಸಂಸ್ಥೆ ಸ್ಥಾಪನೆಗೆ ಭೂಮಿ ಮಂಜೂರು ಮಾಡುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉನ್ನತಾಧಿಕಾರ ಸಮಿತಿಗೆ ಅರ್ಜಿ ಸಲ್ಲಿಸದೇ ನೇರವಾಗಿ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೇ ಸಲ್ಲಿಸಲಾಗಿತ್ತು. ಆದರೆ ಇದು ಕಾನೂನುಬಾಹಿರವಾಗಿದೆ. ಇದಲ್ಲದೆ ಇದನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸದೆ ನೇರವಾಗಿ ಸಚಿವ ಸಂಪುಟದ ಮುಂದಿಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಯಡಿಯೂರಪ್ಪ ಆದೇಶಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಯಾವುದೇ ಶಿಕ್ಷಣ ಸಂಸ್ಥೆಯನ್ನು ಹೊಂದಿರದ ಚಾಣಕ್ಯ ಟ್ರಸ್ಟ್ ಗೆ ಕೇವಲ 50 ಕೋಟಿ ರೂ.ಗೆ 116 ಎಕರೆ ಭೂಮಿ ನೀಡಿರುವುದರ ಹಿಂದಿನ ಕಾರಣ ಬಹಿರಂಗಗೊಳ್ಳಬೇಕು ಎಂದು ಕೆ.ಸಿ. ರಾಜಣ್ಣ ಒತ್ತಾಯಿಸಿದ್ದಾರೆ.
ಈ ಹಿಂದೆ ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಿಕ್ ಬ್ಯಾಕ್ ಪಡೆದ ಆರೋಪ ಯಡಿಯೂರಪ್ಪ ಮೇಲಿತ್ತು. ಈ ಪ್ರಕರಣದಲ್ಲಿ ಸಿಎಂ ಆಗಿದ್ದಾಗಲೇ ಯಡಿಯೂರಪ್ಪ ಬಂಧನವಾಗಿತ್ತು. ಇದೀಗ ಅವರ ಮೇಲೆ ಮತ್ತೆ ಆರೋಪ ಕೇಳಿ ಬಂದಿದೆ.