ಬೆಂಗಳೂರು, ಮಾ 29 (DaijiworldNews/MS): 12 ರಿಂದ 14 ವಯಸ್ಸಿನ ಮಕ್ಕಳ ಕರೋನ ಲಸಿಕಾಕರಣ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅದರ ಪ್ರಕ್ರಿಯೆಯನ್ನು ಚುರುಕುಗೊಳಿಸಲು ನಮ್ಮ ಸರ್ಕಾರವು ರಾಜ್ಯದಾದ್ಯಂತ ಶಾಲೆಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಕ್ಕಳಿಗೆ ಲಸಿಕಾಕರಣವು ಪ್ರಮುಖ ಪಾತ್ರ ವಹಿಸಲಿದ್ದು, 12ರಿಂದ 14 ವರ್ಷದ ಮಕ್ಕಳ ಲಸಿಕಾಕರಣ ಕೇವಲ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತಿತ್ತು. ಇದಲ್ಲದೆ ಶಾಲಾ ವಾರ್ಷಿಕ ಪರೀಕ್ಷೆಗಳು ಲಸಿಕಾಕರಣಕ್ಕೆ ಹಿನ್ನಡೆಯಾಗಿತ್ತು.
ಈ ಹಿನ್ನಲೆಯಲ್ಲಿ 12 ರಿಂದ 14 ವಯಸ್ಸಿನ ಮಕ್ಕಳ ಲಸಿಕಾಕರಣವನ್ನು ಸುಗಮಗೊಳಿಸಲು ಶಾಲೆಗಳಲ್ಲಿ ಏ.1 ರಿಂದ ಲಸಿಕೆ ನೀಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಹೈದರಾಬಾದ್ನ ಬಯೋಲಾಜಿಕಲ್ ಇವಾನ್ಸ್ ತಯಾರಿಸಿದ ಕಾರ್ಬೆವಾಕ್ಸ್ (Corbevax) ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಕಳೆದ ಜನವರಿ 3 ರಿಂದ 15-18 ವರ್ಷ ವಯಸ್ಸಿನ ಹದಿಹರೆಯದ ಮಕ್ಕಳಿಗೆ ಲಸಿಕೆ ಪ್ರಾರಂಭ ಮಾಡಲಾಗಿದ್ದು, ಮಾ. 16 ರಿಂದ 12 ವರ್ಷ ದಿಂದ 14 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.