ತಮಿಳುನಾಡು, ಮಾ 29 (DaijiworldNews/DB): ತಮಿಳುನಾಡಿನ ಜೋಡಿಯೊಂದು ಮೂರು ಮೂರು ಧರ್ಮಗಳ ಪ್ರಕಾರ ಮದುವೆ ಆಗುವ ಮೂಲಕ ಜೀವನದ ಮಹತ್ವದ ಘಟ್ಟದಲ್ಲಿ ಸಾಮರಸ್ಯದ ಸಂದೇಶವನ್ನು ಸಾರಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸಂಪ್ರದಾಯದಂತೆ ವಿವಾಹ ಕಾರ್ಯ ನೆರವೇರಿದೆ.
ತಮಿಳುನಾಡಿನ ಮೈಲಾಡುತುರೈನಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪುರುಷೋತ್ತಮನ್ ಮತ್ತು ಭುವನೇಶ್ವರಿ ಅವರೇ ವಿಶೇಷವಾಗಿ ಮದುವೆಯಾದ ಜೋಡಿ.
ಎಲ್ಲಾ ಧರ್ಮದ ಜನರೊಂದಿಗೆ ಆಡಿ ಬೆಳೆದ ಕಾರಣ ಪುರುಷೋತ್ತಮ್ ಅವರಿಗೆ ಮೂರು ಧರ್ಮಗಳ ಸಂಪ್ರದಾಯದಂತೆ ಮದುವೆಯಾಗುವ ಮನಸ್ಸಾಗಿತ್ತು. ಇದನ್ನು ಕುಟುಂಬಸ್ಥರಿಗೆ ತಿಳಿಸಿದಾಗ ಎರಡೂ ಕಡೆಯಿಂದಲೂ ಗ್ರೀನ್ ಸಿಗ್ನಲ್ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮೂರೂ ಧರ್ಮಗಳ ಪ್ರಕಾರ ಮದುವೆ ಶಾಸ್ತ್ರ ನಡೆದಿದೆ.
ಮಾರ್ಚ್ 26ರಂದು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆದರೆ, ಮಾರ್ಚ್ 27ರಂದು ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಜೋಡಿಯ ನಿರ್ಧಾರಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಮಾಜದಲ್ಲಿ ಸಾಮರಸ್ಯ ಮೂಡಲು ಇಂತಹ ನಡೆ ಶ್ಲಾಘನೀಯ ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ.