ತುಮಕೂರು, ಮಾ 29 (DaijiworldNews/HR): ನಾನು ನಾಲ್ಕು ತಿಂಗಳ ಗರ್ಭಿಣಿ. ನನ್ನ ಗಂಡನನ್ನು ನನ್ನ ಅತ್ತೆಯೇ ಕೊಂದು ಬಿಟ್ರು ಎಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಪ್ಪ ಅವರ ಪತ್ನಿ ಮೇಘನಾ ಕಣ್ಣೀರಾಕ್ಕಿದ್ದಾರೆ.
ನೇಣಾಕೊಂಡು ಸಾಯು ಅಂತ ಮಗನಿಗೆ ತಾಯಿಯೇ ನಿನ್ನೆ ಅತ್ತೆ ಬೈದರು. ಮನನೊಂದ ನನ್ನ ಗಂಡ ಮನೆಯಿಂದ ಹೊರ ಹೋದವರು ವಾಪಸ್ ಬಾರಲೇ ಇಲ್ಲ. ರಾತ್ರಿಯಲ್ಲಾ ಫೋನ್ ಮಾಡಿದೆ, ಕಾಲ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಸಾವಿನ ಸುದ್ದಿ ಬಂತು. ನಾನೇನು ಮಾಡಲಿ? ಹೊಟ್ಟೆಯಲ್ಲಿ ಅವರ ಮಗು ಇದೆ. ನನ್ನನ್ನು ತಬ್ಬಲಿ ಮಾಡಿ ಹೋಗಿಬಿಟ್ರು ಎಂದು ಮೇಘನಾ ಹೇಳಿದ್ದಾರೆ.
25 ವರ್ಷದ ಮೇಘನಾ ಮತ್ತು 45 ವರ್ಷದ ಶಂಕರಣ್ಣ 5 ತಿಂಗಳ ಹಿಂದಷ್ಟೇ ಸರಳವಾಗಿ ಮದ್ವೆಯಾಗಿದ್ದು, ಕಳೆದ ತಿಂಗಳು ಶಂಕರಣ್ಣ-ಮೇಘನಾ ದಂಪತಿ ಊರಿಗೆಲ್ಲ ಊಟ ಹಾಕಿಸಿ ಅದ್ದೂರಿಯಾಗಿ ಪ್ರೇಮಿಗಳ ದಿನ ಆಚರಿಸಿಕೊಂಡಿದ್ದರು. ಆದರೆ ಇಂದು ಬೆಳಗ್ಗೆ ಶಂಕರಣ್ಣನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆಲ್ಲಾ ಸೊಸೆಯೇ ಕಾರಣ ಎಂದು ಮೃತರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನು ನಾನು ಜಮೀನು, ಹಣ, ಅಂತಸ್ತು ನೋಡಿ ಶಂಕರಣ್ಣ ಅವರ ಬಳಿ ಬರಲಿಲ್ಲ. ಅಪ್ಪ-ಅಮ್ಮನನ್ನು ಬಿಟ್ಟು ಮದುವೆಯಾಗಿದ್ದೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಆದರೆ ಎಲ್ಲರೂ ಸೇರಿಕೊಂಡು ಕಾಟ ನೀಡಿದ್ರು. ನನಗೆ ಈ ಮೊದಲೇ ಬೇರೊಬ್ಬರನ ಜತೆ ಲವ್ ಮ್ಯಾರೇಜ್ ಆಗಿತ್ತು. ಆತ ಸಾಲ ಮಾಡಿಕೊಂಡು ನನ್ನನ್ನು ಬಿಟ್ಟು ಹೋದ. ಆತನನ್ನು ಒಂದೂವರೆ ವರ್ಷ ಹುಡುಕಿಸಿದ್ದೆ, ಆತ ಸಿಗಲಿಲ್ಲ. ಪೊಲೀಸ್ ಠಾಣೆಗೂ ದೂರು ನೀಡಿದ್ದೆ. ಕೊನೆಗೆ ರಾಜಣ್ಣ ಎಂಬುವರರು ಶಂಕರಪ್ಪ ಅವರ ಜತೆ ಮದುವೆ ಆಗುವಂತೆ ಪ್ರಸ್ತಾಪ ಮಾಡಿದರು. ಶಂಕರಪ್ಪ ಅವರು ನನ್ನನ್ನು ಇಷ್ಟಪಟ್ಟಿ ಮದುವೆಯಾಗಿದ್ದಾರೆ ಎಂದರು.