ಬೆಂಗಳೂರು, ಮಾ 29 (DaijiworldNews/DB): ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮ ಪ್ರಯುಕ್ತ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಮಾ. 31 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, 3.30ಕ್ಕೆ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅವರ ಗದ್ದುಗೆಗೆ ಪೂಜೆ, ಗೌರವ ಸಲ್ಲಿಸುವರು. ಬಳಿಕ ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಬಿಬಿಎಂಪಿ ವ್ಯಾಪ್ತಿ ನಾಯಕರನ್ನೂ ಈ ವೇಳೆ ಭೇಟಿ ಮಾಡಲಿದ್ದಾರೆ. ಏಪ್ರಿಲ್ 1 ರಂದು ಕಾಂಗ್ರೆಸ್ ನ ವಿವಿಧ ಮುಖಂಡರ ಜತೆ ಸಭೆ ನಡೆಸಲಿದ್ದಾರೆ ಎಂದರು.
ರಾಜ್ಯದಲ್ಲಿ 47 ಲಕ್ಷ ಕಾಂಗ್ರೆಸ್ ಸದಸ್ಯರ ನೋಂದಾವಣೆಯಾಗಿದ್ದು, ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆಯ ಬಗ್ಗೆ 31ರಂದು ಗೊತ್ತಾಗಲಿದೆ. ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡವರು ಮತ್ತು ಮುಂಚೂಣಿ ಘಟಕಗಳ ಮುಖ್ಯಸ್ಥರ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದವರು ಇದೇ ವೇಳೆ ತಿಳಿಸಿದರು.
ಇಂಧನ ಬೆಲೆ ಏರಿಕೆ ವಿರೋಧಿಸಿ ಮಾ. 31ರಂದು ಬೆಳಗ್ಗೆ 8 ರಿಂದ 11 ಗಂಟೆ ಅವಧಿಯಲ್ಲಿ ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ತಮ್ಮ ಮನೆಯ ಮುಂಭಾಗ ವಾಹನ, ಗ್ಯಾಸ್ ಸಿಲಿಂಡರ್ ಇಟ್ಟು ಹೂವಿನ ಹಾರ ಹಾಕಿ ಜಾಗಟೆ ಬಾರಿಸಬೇಕು. ಬಳಿಕ ಇದರ ಫೋಟೋ, ವೀಡಿಯೋಗಳನ್ನು ಪ್ರಧಾನಿಯವರಿಗೆ ಟ್ಯಾಗ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕಬೇಕು. ಬೆಲೆ ಏರಿಕೆ ವಿರೋಧಿಸಿ ಏ. 7ರಂದು ಜಿಲ್ಲಾ ಮಟ್ಟದಲ್ಲಿ ರ್ಯಾಲಿಯೂ ಇದೆ ಎಂದರು.
ಗಾಂಧಿ ಕುಟುಂಬದವರು ಹಲವು ಮಠಗಳಿಗೆ ಭೇಟಿಯಿತ್ತಿದ್ದಾರೆ. ಮಠಗಳು, ಎಲ್ಲ ಧರ್ಮಗಳು ಮತ್ತು ಗಾಂಧಿ ಕುಟುಂಬಕ್ಕೆ ಇರುವ ಸಂಬಂಧ ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧದಂತೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈಶ್ವರಪ್ಪ ಅವರ ವಿರುದ್ಧ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಈಗಾಗಲೇ ಪಕ್ಷದಲ್ಲಿ ಚರ್ಚಿಸಲಾಗಿದೆ. ಮುಖ್ಯಮಂತ್ರಿಯವರು ಏನು ಹೇಳುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದರು.
ಬಿಜೆಪಿಯವರು ಯಾವಾಗ ಚುನಾವಣೆ ಪ್ರಕಟಿಸಿದರೂ ಕಾಂಗ್ರೆಸ್ ಸಜ್ಜಾಗಿದೆ ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಬಂದಿರುವುದಕ್ಕೆ ಯಾವುದೇ ದಾಖಲೆ ಇಲ್ಲ ಎಂಬ ಸಮಿತಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು, ಕಾಂಗ್ರೆಸ್, ಬಿಜೆಪಿ ಯಾರೂ ಈ ಬಿರುದು ನೀಡಿಲ್ಲ, ಬದಲಾಗಿ ಬ್ರಿಟಿಷರು ನೀಡಿರುವುದು. ಈ ಬಗ್ಗೆ ಸಂಶಯಗಳಿದ್ದರೆ ಲಂಡನ್ ಮ್ಯೂಸಿಯಂನಲ್ಲಿ ದಾಖಲೆ ಇದೆ. ಇತಿಹಾಸ ತಿರುಚುವ ಕೆಲಸ ಸರಿಯಲ್ಲ ಎಂದು ತಿಳಿಸಿದರು.