ಜೈಪುರ, ಮಾ 29 (DaijiworldNews/DB): ಕೇಂದ್ರ ಸರ್ಕಾರವು ಕಾಶ್ಮೀರ್ ಫೈಲ್ಸ್ ಟಿಕೆಟ್ ನೀಡಿದಂತೆ ಉಚಿತ ಇಂಧನಕ್ಕಾಗಿ ಕೂಪನ್ ಗಳನ್ನು ನೀಡಬೇಕು ಎಂದು ರಾಜಸ್ಥಾನದ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಕಳೆದೊಂದು ವಾರದಿಂದ ನಿರಂತರ ಏರಿಕೆಯಾಗುತ್ತಿದೆ. ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಇಂಧನ ದರ ಏರಿಕೆ ಮಾಡಿರುವ ಬಿಜೆಪಿ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಟಿಕೆಟ್ ಹಂಚಿದಂತೆ ಇಂಧನ ಕೂಪನ್ ನೀಡಲಿ ಎಂದು ಸವಾಲೆಸೆದರು.
ಬಿಜೆಪಿಯವರು ರಾಮಭಕ್ತರಲ್ಲ, ಬದಲಾಗಿ ರಾವಣ ಭಕ್ತರು. ಗುಜರಾತ್ ಚುನಾವಣೆಯಲ್ಲಿ ಮತ ಸೆಳೆಯುವ ತಂತ್ರಕ್ಕಾಗಿ ಈ ಸಿನೆಮಾವನ್ನು ಪ್ರಚಾರ ಮಾಡಲಾಗುತ್ತಿದೆ. ಪಂಚರಾಜ್ಯ ಚುನಾವಣೆ ಫಲಿತಾಂಶ ಬಂದ ಬಳಿಕ ಬೆಲೆ ಏರಿಕೆ ಮಾಡಲಾಗಿರುವುದು ಜನರಿಗೂ ತಿಳಿದಿದೆ. ಬೆಲೆ ಏರಿಕೆ ವಿರುದ್ದ ಜನರೂ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದವರು ತಿಳಿಸಿದರು.
ದೆಹಲಿಯಲ್ಲಿ ಲೀಟರ್ ಗೆ 99.41 ರೂ. ಇದ್ದ ಪೆಟ್ರೋಲ್ ಬೆಲೆ ಪ್ರಸ್ತುತ 100.21 ರೂ. ಆಗಿದೆ. ಬೆಂಗಳೂರಿನಲ್ಲಿ ನಿನ್ನೆ 104.78 ರೂ. ಇದ್ದ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಜನರ ಸಂಕಷ್ಟದ ಜೀವನದ ಕುರಿತು ಕಾಳಜಿ ಇಲ್ಲ. ಚುನಾವಣೆಯಲ್ಲಿ ಗೆಲ್ಲುವುದೊಂದೇ ಅದರ ಉದ್ದೇಶ. ಅದಕ್ಕಾಗಿ ಹಲವು ಕಸರತ್ತುಗಳನ್ನು ಆ ಪಕ್ಷ ನಡೆಸುತ್ತಿದೆ ಎಂದು ಪ್ರತಾಪ್ ಖಚರಿಯಾವಾಸ್ ಟೀಕಿಸಿದರು.