ಬೆಂಗಳೂರು, ಮಾ 29 (DaijiworldNews/HR): ಸಚಿವ ಕೆ.ಎಸ್. ಈಶ್ವರಪ್ಪ ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಿ ಸ್ವಪಕ್ಷದ ನಾಯಕರು, ಹಿಂದೂ ವಾಹಿನಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಾಟೀಲ್ ಎಂಬುವವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ಸಂತೋಷ್ ಪಾಟೀಲ್ ಎಂಬುವವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಯಾವುದೋ ಷಡ್ಯಂತ್ರ ನಡೆದಿದೆ. ಸಂತೋಷ್ ಪಾಟೀಲ್ ಯಾರು ಎಂಬ ಬಗ್ಗೆ ಬೆಳಗಾವಿ ಜಿಲ್ಲಾಧ್ಯಕ್ಷರನ್ನೂ ಕೇಳಿದ್ದೇನೆ. ಅವರಿಗೂ ಗೊತ್ತಿಲ್ಲ ಎಂದಿದ್ದಾರೆ ಎಂದರು.
ಇನ್ನು ನನ್ನ ವಿರುದ್ಧ ಗುತ್ತಿಗೆದಾರರು ಕೂಡ ಕಮಿಷನ್ ಆರೋಪ ಮಾಡಿ ನಾಯಕರಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದರ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಇಲಾಖೆಯಿಂದ ಯಾವುದೇ ಕಾರ್ಯಾದೇಶ ಕೊಟ್ಟಿಲ್ಲ ಎಂದ ಮೇಲೆ ಹಣ ಕೊಡುವ ಪ್ರಶ್ನೆ ಬರಲ್ಲ. ಈ ಷಡ್ಯಂತ್ರದ ಬಗ್ಗೆ ಮಾರ್ಚ್ 10ರಂದೇ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಈ ಆರೋಪದ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಶೀಘ್ರದಲ್ಲಿ ಬಯಲಾಗಲಿದೆ ಎಂದು ತಿಳಿಸಿದ್ದಾರೆ