ಶಿವಮೊಗ್ಗ, ಮಾ 29 (DaijiworldNews/DB): ಗೃಹ ಸಚಿವರಲ್ಲಿ ದೂರು ನೀಡುವುದಾದರೆ ನೀಡು ಎಂಬುದಾಗಿ ಲಾರಿ ಮಾಲಕರಿಗೆ ಬೆದರಿಕೆ ಹಾಕಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ ಪಿಎಸ್ಐ ಜಯಪ್ಪ ನಾಯ್ಕ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ತಾಲೂಕಿನಲ್ಲಿ ಮರಳು ದಂಧೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಲ ಲಾರಿ ಮಾಲಕರು ಮತ್ತು ಚಾಲಕರು ಪಿಎಸ್ ಐ ವಿರುದ್ದ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದರು. ಇದರಿಂದ ಪಿಎಸ್ ಐ ಜಯಪ್ಪ ಕೋಪಗೊಂಡಿದ್ದರು ಎನ್ನಲಾಗಿದೆ. ಇದೇ ಕಾರಣವನ್ನು ಇಟ್ಟುಕೊಂಡು ಲಾರಿ ಮಾಲಕರೊಬ್ಬರೊಂದಿಗೆ ಫೋನ್ ನಲ್ಲಿ ಮಾತುಕತೆ ನಡೆಸುತ್ತಾ, ಗೃಹ ಸಚಿವರಿಗೆ ಹೇಳುತ್ತೀಯಾ ಹೇಳು ಎಂಬುದಾಗಿ ಬೆದರಿಕೆ ಹಾಕಿದ್ದರು ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು.
ಈ ಆಡಿಯೋ ವೈರಲ್ ಆದ ಬೆನ್ನಲ್ಲೇ ಪಿಎಸ್ ಐ ಜಯಪ್ಪ ಅವರನ್ನು ದಾವಣಗೆರೆಯ ಐಜಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ತೆರವಾದ ಜಾಗಕ್ಕೆ ಕುಂಸಿ ಠಾಣೆಯ ನವೀನ್ ಮಠಪತಿ ಅವರನ್ನು ನಿಯೋಜಿಸಲಾಗಿದೆ.
ಇದೇ ವೇಳೆ ಲಾರಿಗಳನ್ನು ಅಡ್ಡಗಟ್ಟಿ ಹಣ ಪಡೆದ ಆರೋಪ ಬಂದ ಹಿನ್ನೆಲೆಯಲ್ಲಿ ಗಸ್ತು ವಾಹನದ ಏಳು ಮಂದಿ ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸುರೇಶ್, ಸುದರ್ಶನ್, ನಾಗರಾಜ್, ಲೋಕೇಶ್, ಗಂಗಾಧರ್, ಕುಮಾರ್ ಮತ್ತು ಬಸಲಿಂಗಪ್ಪ ಅಮಾನತುಗೊಂಡ ಪೊಲೀಸ್ ಸಿಬಂದಿ.