ಬೆಂಗಳೂರು, ಮಾ 29 (DaijiworldNews/DB): ಹಿಂದೂಗಳನ್ನು ಕೋಮು ಧ್ರುವೀಕರಣಗೊಳಿಸಿ ಒಡೆದಾಳುವ ಬಿಜೆಪಿಯ ರಾಜಕೀಯ ತಂತ್ರಗಳು ರಾಜ್ಯದ ಜನತೆಗೆ ಮನದಟ್ಟಾಗಿದೆ. ಮುಂದಿನ ಚುನಾವಣೆಯಲ್ಲಿ ಇಂತಹ ವಿಚಾರಗಳಿಂದ ಆಡಳಿತಕ್ಕೆ ಬರುವ ಬಿಜೆಪಿ ತಂತ್ರಗಾರಿಕೆ ಫಲಿಸುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮ ರಾಜಕಾರಣ, ಒಡೆದಾಳುವ ರಾಜಕಾರಣ ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ. ಕರ್ನಾಟಕವನ್ನು ಉತ್ತರಪ್ರದೇಶ, ಮಣಿಪುರ, ಪಂಜಾಬ್, ಉತ್ತರಾಖಂಡ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಆಗುವುದಿಲ್ಲ. ಜನ ಬಿಜೆಪಿಯ ಒಳತಂತ್ರ ಅರಿತಿದ್ದಾರೆ. ಅವರೆಂದೂ ಆ ಪಕ್ಷವನ್ನು ಕ್ಷಮಿಸುವುದಿಲ್ಲ ಎಂದರು.
ಕಾಂಗ್ರೆಸ್ ಜಾತಿ, ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ. ಮಾನವೀಯತೆಯ ರಾಜಕೀಯವೇ ನಮ್ಮ ಗುರಿ. ಮನುವಾದ ಮತ್ತು ಮನುಷ್ಯತ್ವದ ನಡುವಿನ ಸಂಘರ್ಷದಲ್ಲಿ ಕೊನೆಗೆ ಮನುಷ್ಯತ್ವವೇ ಗೆಲ್ಲುವುದು ಎಂದವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸಂವಿಧಾನದ ಪ್ರಕಾರ ನಡೆಯುತ್ತದೆ. ದಿ. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ವೇಳೆ ವಾಹಿನಿಯಲ್ಲಿ ಮಹಾಕಾವ್ಯಗಳು ಪ್ರಸಾರವಾಗುತ್ತಿದ್ದವು. ನಾವೂ ಹಿಂದೂಗಳೇ. ನಾವೂ ರಾಮಾಯಣ, ಮಹಾಭಾರತಗಳನ್ನು ಓದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸೂಕ್ಷ್ಮ ವಿಚಾರಗಳನ್ನು ಹಿಡಿದುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ. ನಾವು ಧನಾತ್ಮಕ ರಾಜಕಾರಣ ಮಾಡುತ್ತಿದ್ದೇವೆ ಎಂದು ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟರು.