ಬೆಂಗಳೂರು, ಮಾ 29 (DaijiworldNews/DB): ನನ್ನ ತಾಯಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಇದರ ಬಗ್ಗೆ ಆತಂಕ ಅನಗತ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಕುಟುಂಬದ ವ್ಯವಹಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಅದೊಂದು ತೆರೆದ ಪುಸ್ತಕದಂತೆ. ನೋಟಿಸ್ ನೀಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಇದರ ಬಗ್ಗೆ ಆತಂಕ ಪಡುವ ಅಗತ್ಯವೂ ಇಲ್ಲ. ಯಾವುದೇ ವ್ಯವಹಾರವನ್ನೂ ಪಾರದರ್ಶಕ ರೀತಿಯಲ್ಲೇ ನಡೆಸುವ ಕುಟುಂಬ ನಮ್ಮದು ಎಂದರು.
ಎಚ್.ಡಿ. ದೇವೇಗೌಡರಾಗಲೀ, ನಾನು ಅಥವಾ ನಮ್ಮ ಕುಟುಂಬದ ಇತರ ಯಾರೇ ಆಗಲಿ ರಾಜಕೀಯ ಜೀವನದಲ್ಲಿ ಹಣಕ್ಕೆ ಪ್ರಾಮುಖ್ಯತೆ ನೀಡಿಲ್ಲ. ಜನಸೇವೆಯೊಂದೇ ನಮ್ಮ ಮೂಲಮಂತ್ರ. ನಾವು ಪರಿಶುದ್ದವಾಗಿದ್ದರೆ ಯಾವ ನೋಟಿಸ್ ಗೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದಕ್ಕೆ ಬೇಕಾದ ಸಮರ್ಪಕ ಉತ್ತರ ನೀಡಿದರಾಯಿತು ಎಂದವರು ತಿಳಿಸಿದರು.