ಚಿಕ್ಕಬಳ್ಳಾಪುರ, ಮಾ 27 (DaijiworldNews/HR): ಮನೆಯಿಂದ ಶನಿವಾರ ಸಂಜೆ ನಾಪತ್ತೆಯಾಗಿದ್ದ ಅಕ್ಕ-ತಂಗಿ ಶವವಾಗಿ ಇಂದು ಮಧ್ಯಾಹ್ನ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿ ನಡೆದಿದೆ.
ಮೃತಪಟ್ಟಿರುವ ಅಕ್ಕ ತಂಗಿಯನ್ನು ಅಗಲಗುರ್ಕಿ ಗ್ರಾಮದ ಅಶ್ವಿನಿ(16) ಮತ್ತು ನಿಶ್ಚಿತಾ(14) ಎಂದು ಗುರುತಿಸಲಾಗಿದೆ.
ಅಕ್ಕ ಅಶ್ವಿನಿ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು,ಈ ವಿಚಾರ ಗೊತ್ತಾಗಿ ಮಗಳಿಗೆ ಅಪ್ಪ-ಅಮ್ಮ ಬೈದು ಬುದ್ಧಿವಾದ ಹೇಳಿದ್ದರು. ಮನನೊಂದ ಅಶ್ವಿನಿ, ತನ್ನ ತಂಗಿಯನ್ನೂ ಕರೆದುಕೊಂಡು ಮನೆಯಿಂದ ಶನಿವಾರ ಸಂಜೆ ಹೊರ ಹೋಗಿದ್ದಳು. ರಾತ್ರಿ ಎಷ್ಟೊತ್ತಾದರೂ ಅಕ್ಕ-ತಂಗಿ ಇಬ್ಬರೂ ಮನೆಗೆ ವಾಪಸ್ ಬಂದಿರಲಿಲ್ಲ. ಮನೆಯವರು ಊರೆಲ್ಲಾ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.
ಇನ್ನು ಇಂದು ಮಧ್ಯಾಹ್ನ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಅಕ್ಕ-ತಂಗಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.