ಬೆಂಗಳೂರು, ಮಾ 27 (DaijiworldNews/DB): ಸಮವಸ್ತ್ರ ನಿಯಮ ಇರುವುದು ಶಾಲೆಯಲ್ಲೇ ಹೊರತು ಪರೀಕ್ಷಾ ಕೇಂದ್ರಗಳಲ್ಲಿ ಇಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶೇಷಾದ್ರಿಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸೆಸ್ಸೆಲ್ಸಿ ಪರೀಕ್ಷೆಗಳು ಆಯಾ ಶಾಲೆಗಳಲ್ಲೇ ನಡೆಯುವುದಿಲ್ಲ. ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಆದರೆ ಪರೀಕ್ಷೆ ಬರೆಯಲು ಸಮವಸ್ತ್ರ ಕಡ್ಡಾಯ ಮಾಡಿದ್ದಾರೆ. ಕೆಲವು ಶಾಲೆಗಳಲ್ಲಿ ಹಿಜಾಬ್ ಸಮವಸ್ತ್ರ ಇದೆ. ಅದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರು, ಸ್ವಾಮೀಜಿಗಳು ಸೇರಿದಂತೆ ಅನೇಕರು ವಿವಿಧ ರೀತಿಯಲ್ಲಿ ದುಪಟ್ಟಾ ಹಾಕುತ್ತಾರೆ ಎಂಬುದಾಗಿ ಸಿದ್ಧರಾಮಯ್ಯನವರು ಹೇಳಿದ್ದಾರೆ. ಸರ್ಕಾರ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂಬ ಉದ್ದೇಶ ಅವರದು. ಆದರೆ ಅವರ ಕಾಳಜಿಯನ್ನು ತಿರುಚಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಭಾರತವು ಎಲ್ಲಾ ಧರ್ಮ, ಸಮುದಾಯದವರಿಗೆ ಸೇರಿದ ರಾಷ್ಟ್ರ. ಉರೂಸ್ ಸಂದರ್ಭದಲ್ಲಿ ಹಿಂದೂ ವರ್ತಕರು ವ್ಯಾಪಾರ ಮಾಡುತ್ತಾರೆ. ದೇವಸ್ಥಾನಗಳ ಬಳಿ ಅನ್ಯಕೋಮಿನ ವರ್ತಕರಿಗೆ ಅವಕಾಶ ಇಲ್ಲ ಎಂದರೆ ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದವರು ವಿಷಾದ ವ್ಯಕ್ತಪಡಿಸಿದರು.
ಅನಗತ್ಯ ವಿಚಾರಗಳನ್ನು ಎಳೆದು ತಂದು ದೊಡ್ಡ ವಿಷಯ ಮಾಡುವುದು, ಸಾಮಾಜಿಕ ತಾಣ, ಮಾಧ್ಯಮಗಳಲ್ಲಿ ಅವುಗಳನ್ನು ಹಾಕಿ ಒಂದಷ್ಟು ವಿವಾದ ಸೃಷ್ಟಿಸುವುದೇ ಬಿಜೆಪಿಯ ಉದ್ದೇಶ. ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಆ ಪಕ್ಷದ ಮುಖಂಡರು ನಿರಂತರವಾಗಿ ಮಾಡುತ್ತಿದ್ದಾರೆ ಎಂದ ಅವರು, ಹರ್ಷನಂತೆ ದಿನೇಶ್, ಸಯ್ಯದ್ ಶುಬಾನ್ ಅವರ ಕೊಲೆ ನಡೆದಿದೆ. ಆದರೆ ಈ ಬಗ್ಗೆ ಅವರು ಚಕಾರವೆತ್ತುತ್ತಿಲ್ಲ. ತಪ್ಪು ಮಾಡಿದವರು ಯಾರೇ ಆದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದರು.