ಮುಂಬೈ, ಮಾ 27 (DaijiworldNews/DB): ಬುರ್ಹಾನ್ ವಾನಿ, ಅಪ್ಜಲ್ ಗುರು ಮುಂತಾದವರನ್ನು ಬೆಂಬಲಿಸಿದ್ದ ಮುಫ್ತಿ ಮೆಹಬೂಬಾ ಜೊತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿರುವುದರ ಹಿಂದಿನ ಉದ್ದೇಶವೇನು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮೆಹಬೂಬಾ ಮುಫ್ತಿ ಬಿಜೆಪಿಯ ಉತ್ತಮ ಸ್ನೇಹಿತೆ. ಮುಫ್ತಿ ಅವರ ಪಕ್ಷ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದೆ ಎನ್ನುವ ಸತ್ಯ ಬಿಜೆಪಿಗೆ ತಿಳಿದಿದೆ. ಅಲ್ಲದೆ ಬುರ್ಹಾನ್ ವಾನಿ, ಅಪ್ಜಲ್ ಗುರು ಮುಂತಾದವರನ್ನು ಮುಫ್ತಿ ಬೆಂಬಲಿಸಿದ್ದಾರೆ. ಅಂತಹವರೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ಆಪಾದಿಸಿದರು.
ಕಾಶ್ಮೀರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಫ್ತಿ ಪಾಕ್ ನೊಂದಿಗೆ ಮಾತುಕತೆ ನಡೆಸಬೇಕು ಎಂದಿದ್ದಾರೆ. ಅವರ ಹೇಳಿಕೆಗಳಿಗೆ ಬಿಜೆಪಿಯೇ ಹೊಣೆ. ಕಾಶ್ಮೀರವನ್ನು ಪಾಕ್ ಗೆ ಸೇರಿಸುವ ಬಗ್ಗೆ ಒಲವಿರುವ ಮತ್ತು ಉಗ್ರರ ಪರ ಸಹಾನುಭೂತಿ ವ್ಯಕ್ತಪಡಿಸುವ ಆಕೆಯೊಂದಿಗೆ ಸೇರಿ ಬಿಜೆಪಿ ಪಕ್ಷ ಬಲಪಡಿಸಲು ಶ್ರಮಿಸುತ್ತಿರುವುದು ನಾಚಿಕೆಗೇಡು ಎಂದು ಇದೇ ವೇಳೆ ಅವರು ಬಿಜೆಪಿ ವಿರುದ್ದ ಹರಿಹಾಯ್ದರು.