ಬಾಗಲಕೋಟೆ, ಮಾ 27 (DaijiworldNews/DB): ಸ್ವಾಮೀಜಿಗಳನ್ನು ಹಿರಿ-ಕಿರಿಯರು ಎಂದು ವಿಭಾಗಿಸುವ ಮೂಲಕ ಒಡೆಯುವ ಕೆಲಸಕ್ಕೆ ಸಿದ್ಧರಾಮಯ್ಯ ಮುಂದಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತರಲ್ಲಿ ಒಡಕು ಮೂಡಿಸಿದ ಸಿದ್ದರಾಮಯ್ಯ ಪ್ರಸ್ತುತ ಸ್ವಾಮೀಜಿಗಳನ್ನು ಹಿರಿ-ಕಿರಿ ಎಂದು ವಿಭಾಗಿಸುತ್ತಿದ್ದಾರೆ. ಸಾಧು-ಸಂತರನ್ನು ಒಡೆಯುವ ಕೆಲಸ ಮಾಡುವುದು ಅವರಿಗೆ ಕ್ಷೋಭೆಯಲ್ಲ. ಕಾಂಗ್ರೆಸ್ ನವರೇ ಸಿದ್ದರಾಮಯ್ಯ ಮಾತನ್ನು ಬೆಂಬಲಿಸಿಲ್ಲ ಎಂದರು.
ಹಿಂದುಗಳನ್ನು ಒಡೆಯುವ ಕೆಲಸ ಮಾಡಬೇಡಿ. ಹೀಗೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಈಗಾಗಲೇ ನಿಮ್ಮ ಕ್ಷೇತ್ರದ ಜನ ನಿಮಗೆ ತೋರಿಸಿಕೊಟ್ಟಿದ್ದಾರೆ. ಅದು ತಿಳಿದೂ ಇಂತಹ ಸಾಹಸಕ್ಕೆ ಕೈ ಹಾಕುವುದನ್ನು ಮೊದಲು ನಿಲ್ಲಿಸಿದರೆ ಉತ್ತಮ ಎಂದು ಈಶ್ವರಪ್ಪ ಸಲಹೆ ನೀಡಿದರು. ಜಮೀರ್ ಅಹ್ಮದ್ ಅವರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕೆಂಬ ಇಚ್ಚೆ ಇದ್ದರೆ ಚಾಮರಾಜಪೇಟೆಯಿಂದ ಸ್ಪರ್ಧಿಸುವುದಾಗಿ ಈಗಲೇ ಹೇಳಿಬಿಡಿ ಎಂದು ಅವರು ಇದೇ ವೇಳೆ ವ್ಯಂಗ್ಯವಾಡಿದರು.