ಇಂದೋರ್, ಮಾ 27 (DaijiworldNews/DB): ಹತ್ತು ವರ್ಷ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮತ್ತು ಇತರ ಆರು ಮಂದಿಗೆ ಇಂದೋರ್ನ ಜಿಲ್ಲಾ ನ್ಯಾಯಾಲಯವು ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಶೂರಿಟಿ ಮೇಲೆ ಜಾಮೀನನ್ನೂ ಒದಗಿಸಿದೆ.
ಭಾರತೀಯ ಜನತಾ ಯುವ ಮೋರ್ಚಾವು 2011ರಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅದರ ಕಾರ್ಯಕರ್ತರೊಂದಿಗೆ ಘರ್ಷಣೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯಸಭೆ ಸದಸ್ಯ, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರಿಗೆ ಜೈಲು ಶಿಕ್ಷೆ ತೀರ್ಪು ನೀಡಿ ಶನಿವಾರ ಇಂದೋರ್ ನ್ಯಾಯಾಲಯ ಆದೇಶ ಹೊರಡಿಸಿದೆ. ನ್ಯಾಯಾಧೀಶ ಮುಖೇಶ್ ನಾಥ್ ಅವರು ಈ ತೀರ್ಪು ನೀಡಿದ್ದಾರೆ. ಆದರೆ ಬಳಿಕ ದಿಗ್ವಿಜಯ್ ಸಿಂಗ್ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ ತಲಾ 25 ಸಾವಿರ ರೂ.ಗಳ ಶ್ಯೂರಿಟಿಯ ಮೇಲೆ ಜಾಮೀನು ಕೂಡಾ ಒದಗಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಅಪರಾಧಿಗಳಿಗೆ ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದೆ.
ಈ ಬಗ್ಗೆಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ್ ಸಿಂಗ್, ದಶಕದಷ್ಟು ಹಳೆಯ ಪ್ರಕರಣದಲ್ಲಿ ಈ ತೀರ್ಪು ಬಂದಿದೆ. ಆದರೆ ಎಫ್ಐಆರ್ನಲ್ಲಿ ನನ್ನ ಹೆಸರಿರಲಿಲ್ಲ. ಬಳಿಕ ನಡೆದ ಬೆಳವಣಿಗೆಯಲ್ಲಿ ರಾಜಕೀಯ ಒತ್ತಡಗಳ ಕಾರಣಗಳಿಂದಾಗಿ ನನ್ನ ಹೆಸರನ್ನು ಸೇರಿಸಲಾಗಿದೆ. ಈ ಸಂಬಂಧ ನಾನು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇನೆ ಎಂದಿದ್ದಾರೆ.
ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಉಜ್ಜಯಿನಿ ಸಂಸದ ಪ್ರೇಮಚಂದ್ ಗುಡ್ಡು ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 325 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 109 (ಹಲ್ಲೆಗೆ ಪ್ರಚೋದನೆ) ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಲಾಗಿದೆ. ಅನಂತ್ ನಾರಾಯಣ್, ಜೈಸಿಂಗ್ ದರ್ಬಾರ್, ಅಸ್ಲಾಂ ಲಾಲಾ ಮತ್ತು ದಿಲೀಪ್ ಚೌಧರಿ ಅವರನ್ನು ಐಪಿಸಿ ಸೆಕ್ಷನ್ 325 ಅಡಿಯಲ್ಲಿ ದೋಷಿಗಳೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ತಾರಾನಾದ ಕಾಂಗ್ರೆಸ್ ಶಾಸಕ ಮಹೇಶ್ ಪರ್ಮಾರ್, ಮುಖೇಶ್ ಭಾಟಿ ಮತ್ತು ಹೇಮಂತ್ ಚೌಹಾಣ್ ಅವರನ್ನು ಕೋರ್ಟ್ ದೋಷಮುಕ್ತಗೊಳಿಸಿದೆ.