ಕೊಲ್ಕತ್ತಾ, ಮಾ 27 (DaijiworldNews/DB): ಪಶ್ಚಿಮ ಬಂಗಾಳದ ಬಿರ್ಭೂಮ್ ನಲ್ಲಿ ಹಿಂಸಾಚಾರ ನಡೆದು ಎಂಟು ಮಂದಿ ಸಜೀವದಹನಗೊಂಡಿದ್ದ ಜಾಗದಲ್ಲಿ ಮತ್ತೆ 40 ಕಚ್ಚಾ ಬಾಂಬ್ಗಳು ಪತ್ತೆಯಾಗಿದೆ. ಎಲ್ಲಾ ಬಾಂಬ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಿಎಂಸಿ ಮುಖಂಡನ ಹತ್ಯೆಗೆ ಪ್ರತೀಕಾರವಾಗಿ ಗುಂಪೊಂದು ವಿರುದ್ಧ ಗುಂಪಿನ ಮನೆಗಳ ಮೇಲೆ ದಾಳಿ ನಡೆಸಿ ಮಹಿಳೆಯರು ಮತ್ತು ಮಕ್ಕಳು ಸೇರಿ ಎಂಟು ಮಂದಿಯನ್ನು ಥಳಿಸಿ ಸಜೀವದಹನಗೊಳಿಸಿತ್ತು. ಅಲ್ಲದೆ ಈ ಘಟನೆ ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಘಟನೆಯ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕೇಂದ್ರ ಸರಕಾರ ಪೊಲೀಸರಿಗೆ ಆದೇಶಿಸಿತ್ತು.
ಪರಿಶೀಲನೆ ಸಂದರ್ಭ ಹಿಂಸೆ ನಡೆದ ಬಿರ್ಭೂಮ್ ಜಿಲ್ಲೆಯ ರಾಮ್ಪುರಹತ್ನ ಮಾರ್ಗಮ್ನಲ್ಲಿ ಶನಿವಾರ ಮತ್ತೆ 40 ಕಚ್ಚಾ ಬಾಂಬ್ಗಳು ಪತ್ತೆಯಾಗಿವೆ. ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಭಾಗದಲ್ಲಿ ನಾಲ್ಕು ಬಕೆಟ್ಗಳಲ್ಲಿ ಈ ಬಾಂಬ್ ಗಳನ್ನು ಮುಚ್ಚಿಡಲಾಗಿತ್ತು ಎಂದು ಬಿರ್ಭಮ್ ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ನಾಥ್ ತ್ರಿಪಾಠಿ ತಿಳಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂಸಾಚಾರ ಘಟನೆಯನ್ನು ಪ್ರಸ್ತುತ ಕೇಂದ್ರೀಯ ತನಿಖಾ ದಳಕ್ಕೆ ತನಿಖೆಗೆ ವಹಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ. ಸಿಬಿಐಗೆ ಕೇಂದ್ರ ಸರಕಾರ ತನಿಖೆಗೆ ಗಡುವು ನೀಡಿದ ಹಿನ್ನೆಲೆಯಲ್ಲಿ ಮೂರು ತಂಡಗಳಲ್ಲಿ ಸಿಬಿಐಯ 30 ಸದಸ್ಯರು ತನಿಖೆ ನಡೆಸುತ್ತಿದ್ದಾರೆ.