ಬೆಂಗಳೂರು, ಮಾ 27 (DaijiworldNews/DB): ಕಾಂಗ್ರೆಸ್ ಪಕ್ಷ ಯಾವಾಗಲೂ ಸಂವಿಧಾನದಲ್ಲಿರುವ ಅವಕಾಶಗಳ ಪರವಾಗಿಯೇ ಇರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಮವಸ್ತ್ರದ ಬಣ್ಣದ ದುಪಟ್ಟಾ ಧರಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ನೀಡಬೇಕೆಂಬ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
ಹಿಜಾಬ್ ವಿಚಾರದಲ್ಲಿ ಹಠ ಹಿಡಿದು ಶೈಕ್ಷಣಿಕ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ಎಸೆಸ್ಸೆಲ್ಸಿ ಪರೀಕ್ಷೆಯನ್ನು ಹಿಜಾಬ್ ಧರಿಸಿ ಬರೆಯುವಂತಿಲ್ಲ ಎಂಬುದಾಗಿ ಶಿಕ್ಷಣ ಇಲಾಖೆ ಆದೇಶಿಸಿದೆ. ಇದರ ಕುರಿತು ಹೆತ್ತವರು, ಧರ್ಮಗುರುಗಳು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರವೂ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು ಎಂದರು.
ಮಕ್ಕಳಿಗೆ ಕೆಲವು ವಿಚಾರಗಳು ತಿಳಿಯುವುದಿಲ್ಲ. ಮುಗ್ದ ಮಕ್ಕಳನ್ನು ಬಳಸಿಕೊಂಡು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದು. ಅದಕ್ಕೆ ಉತ್ತೇಜನವನ್ನೂ ನೀಡಬಾರದು. ಶಿಕ್ಷಣದ ಮಹತ್ವವನ್ನು ಅವರಿಗೆ ತಿಳಿಹೇಳಿ ಭವಿಷ್ಯ ರೂಪಿಸುವುದರತ್ತಲೇ ಗಮನ ಕೊಡಲು ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು.