ಹುಬ್ಬಳ್ಳಿ, ಮಾ 27 (DaijiworldNews/DB): ರಾಜ್ಯಕ್ಕೆ ಎಪ್ರಿಲ್ ನಲ್ಲಿ ಅಮಿತ್ ಶಾ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಚರ್ಚೆಗೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸವಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಕುರಿತು ರಾಜ್ಯ ಭೇಟಿ ವೇಳೆ ಮಾತುಕತೆ ನಡೆಸಲು ಆಗುವುದಿಲ್ಲ. ನವದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಈ ಕುರಿತು ಚರ್ಚಿಸಬೇಕು. ವರಿಷ್ಠರು ದಿಲ್ಲಿಗೆ ಕರೆದಾಗ ನಾನು ಹೋಗಿ ಈ ಬಗ್ಗೆ ಮಾತನಾಡುತ್ತೇನೆ. ಸಹಕಾರಿ ಕ್ಷೇತ್ರಗಳಲ್ಲಿ ಕೆಲವು ಪ್ರಮುಖ ಸುಧಾರಣೆಗಳನ್ನು ತರುವ ಉದ್ದೇಶ ಅವರ ಮುಂದಿದೆ ಎಂದರು.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ರಾಷ್ಟ್ರದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ರಾಜ್ಯದಲ್ಲಿಯೂ ಚುನಾವಣೆ ವೇಳೆ ಈ ಫಲಿತಾಂಶವು ಹೆಚ್ಚು ಅನುಕೂಲವಾಗಲಿದೆ. 2024ರ ಸಾರ್ವತ್ರಿಕ ಚುನಾವಣೆಗೆ ಪಂಚರಾಜ್ಯ ಚುನಾವಣಾ ಫಲಿತಾಂಶ ದಿಕ್ಸೂಚಿಯಾಗಿದೆ ಎಂದವರು ತಿಳಿಸಿದರು.
ಕಳೆದ 70 ವರ್ಷಗಳಿಂದಲೂ ಶಾಲೆಗಳಿಲ್ಲಿ ಸಮವಸ್ತ್ರ ವ್ಯವಸ್ಥೆ ಜಾರಿಯಲ್ಲಿದೆ. ಇದನ್ನು ಯಾರೂ ವಿರೋಧಿಸಿರಲಿಲ್ಲ. ಆದರೆ ಪ್ರಸ್ತುತ ಕೆಲವು ಕಾಣದ ಕೈಗಳು ಮುಗ್ದ ಮಕ್ಕಳನ್ನು ಬಳಸಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಸ್ಲಿಂ ಮಾರಾಟಗಾರರಿಗೆ ಹಿಂದೂ ಧಾರ್ಮಿಕ ಕೇಂದ್ರಗಳ ಬಳಿ ಮಾರಾಟಕ್ಕೆ ಅವಕಾಶ ನಿರಾಕರಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ 2002 ರ ಅಡಿಯಲ್ಲಿರುವ ನಿಯಮಗಳನ್ನೇ ಪ್ರಸ್ತುತ ಜಾರಿಗೊಳಿಸಲಾಗಿದೆ. ವಿವಾದ ಎದ್ದಿರುವ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.